ಫಾದರ್ ಚಸರಾರ ಹೆಸರು ಕೇಳಿದಾಗಲೆಲ್ಲಾ ನನಗೆ ನಾನೊಬ್ಬ ನತದೃಷ್ಟನೆಂಬ ಭಾವ ಸದಾ ಕಾಡುತ್ತಿರುತ್ತದೆ.ಚಿಕ್ಕಂದಿನಿಂದಲೂ ಅವರ ಅಮರ ಗೀತೆಗಳನ್ನು ಕೇಳಿಕೊಂಡು,ಹಾಡಿಕೊಂಡು ಬೆಳೆದ ನನಗೆ ಅವರನ್ನು ಒಮ್ಮೆಯಾದರೂ ಭೇಟಿಮಾಡಲೇ ಬೇಕು ಎಂಬ ಆಸೆ ಕೊನೆಗೂ ಆಸೆಯಾಗಿಯೇ ಉಳಿದು ಬಿಟ್ಟಿದೆ.ನಾನು ಪ್ರತಿನಿತ್ಯ ಚರ್ಚಿಗೆ ಹೋಗಲು ಪ್ರಮುಖ ಕಾರಣ ಫಾದರ್ ಚಸರಾ ರಚಿಸಿ,ರಾಗ ಸಂಯೋಜಿಸಿದ ಮಹೋನ್ನತ ಗೀತೆಗಳು.ಮುಂಜಾನೆ ಐದುವರೆ ಗಂಟೆಗೆ ಎದ್ದು,ಶುಭ್ರವಾಗಿ ಸರಿಯಾಗಿ ಆರುಗಂಟೆಗೆ ದೇವಾಲಯದಲ್ಲಿ ಸೇರಿದಾಗ ಪ್ರವೇಶ ಗೀತೆಯಿಂದ ಹಿಡಿದು ಅಂತಿಮ ಗೀತೆಯವರೆಗೂ ಅವರದೇ ಹಾಡುಗಳನ್ನು ಹಾಡುತ್ತಿದ್ದೆವು.
ಬಹಳ ಅರ್ಥಪೂರ್ಣವಾದ ಹೃದಯಕ್ಕೆ ನಾಟುವ ಸಾಹಿತ್ಯವನ್ನು ಬರೆದು,ಅದಕ್ಕೆ ಜೀವ ತುಂಬುವ ರಾಗ ಸಂಯೋಜಿಸಿ ಕ್ರೈಸ್ತ ಸಾರಸ್ವತ ಲೋಕಕ್ಕೆ ಎಂದೂ ಮರೆಯಲಾಗದ ಮಹೋನ್ನತ ಗೀತೆಗಳನ್ನು ನೀಡಿದ ಈ ಮಹಾನ್ ಚೇತನವನ್ನು ನೋಡಲು ಚಿಕ್ಕಂದಿನಿಂದಲೇ ನಿರ್ದರಿಸಿದ್ದೆನಾದರೂ ಕೊನೆಗೆ ಅವರನ್ನು ನಾ ಬೇಟಿ ಮಾಡಿದ್ದು ಮರಿಯಾಪುರದ ಮಣ್ಣಿನಲ್ಲಿ.
ಭೈರತಿಯೆಂಬ ಪುಟ್ಟ ಗ್ರಾಮದಲ್ಲಿ ಜನಿಸಿದ್ದ ನನಗೆ ಪ್ರಪಂಚದ ಅರಿವಾಗಿದ್ದು ನಾನು ಗುರುಮಠಕ್ಕೆ ಸೇರಿದ ನಂತರ.ನನ್ನೊಳಗೂ ಒಬ್ಬ ಬರಹಗಾರನಿದ್ದಾನೆ ಎಂಬುದನ್ನು ನಾ ಕಂಡುಕೊಳ್ಳುವಂತೆ ಮಾಡಿದ್ದು ಚಸರಾ.ನನ್ನ ಪ್ರೌಢ ಶಾಲೆಯ ದಿನಗಳಿಂದಲೂ ನಾನು ಬರೆಯುತ್ತಿದ್ದೆನಾದರೂ ನನ್ನ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಫಾದರ್ ಚಸರಾ ತೀರಿಕೊಂಡ ನಂತರವೇ.ಅವರ ಸಾವಿನ ಸುದ್ಧಿ ಬರಸಿಡಿಲ ಹಾಗೆ ಅಪ್ಪಳಿಸುತ್ತಿದ್ದಂತೆ ನನ್ನನ್ನು ನಾನೇ ಶಪಿಸಿಕೊಂಡೆ.ಕಾರಣ ಅವರ ಸಾವಿಗೆ ಮೂರು ತಿಂಗಳಿಗೆ ಮುಂಚಿತವಾಗಿ ನಾನು ನನ್ನ ಸಂಬಂಧಿಕರೊಬ್ಬರ ನಿಶ್ಚಿತಾರ್ಥಕ್ಕೆ ಚಾಮರಾಜಪೇಟೆಗೆ ಹೋಗಿದ್ದೆ.ಆಗ ಫಾದರ್ ಚಸರಾ ಅಲ್ಲಿಯ ಧರ್ಮಕೇಂದ್ರದ ಗುರುವಾಗಿದ್ದುದು ನನಗೆ ತಿಳಿದಿರಲಿಲ್ಲ ಹಾಗು ನನ್ನ ದುರಾದೃಷ್ಟಕ್ಕೆ ನಿಶ್ಚಿತಾರ್ಥ ನೆರವೇರಿಸಿಕೊಡಲು ಫಾದರ್ ಚಸರಾ ಬರಲಿಲ್ಲ ಬದಲಿಗೆ ಅವರ ಸಹಾಯಕ ಗುರುಗಳು ಆಗಮಿಸಿದ್ದರು.
ಚಸರಾ ನನ್ನ ಬದುಕಿನ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿದ್ದಾರೆ.ಸಂಶಯವೇ ಇಲ್ಲ.ಒಬ್ಬ ಕವಿಯಾಗಿ,ಲೇಖಕನಾಗಿ,ಪತ್ರಕರ್ತನಾಗಿ,ಚಿಂತಕನಾಗಿ,ವಾಗ್ಮಿಯಾಗಿ,ಸಾಹಿತಿಯಾಗಿ,ಸಂಗೀತಗಾರನಾಗಿ ಆತ ಒಬ್ಬ ಕನ್ನಡ ಕ್ರೈಸ್ತ ಜಗತ್ತು ಕಂಡ ಅಪರೂಪದ ಬಹುಮುಖ ಪ್ರತಿಭೆ.ನಾನು ಕೇಳ್ಪಟ್ಟಂತೆ ಇವುಗಳೆಲ್ಲವನ್ನೂ ಮೀರಿ ಅವರಲ್ಲಿದ್ದ ಆಪ್ತತೆ ಧರ್ಮಗಳನ್ನೂ ಮೀರಿ ಅವರಿಗೆ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿತ್ತು.ಇಂದಿಗೂ ನಾ ಭಾವಿಸಿರುವುದಿಷ್ಟೇ.ನಾನು ಏಕಲವ್ಯ,ಅವರು ನನ್ನ ಪ್ರೀತಿಯ ದ್ರೋಣಾಚಾರ್ಯ.ಅಂದು ಮಹಾಭಾರತದಲ್ಲಿ ದ್ರೋಣಾಚಾರ್ಯ ಏಕಲವ್ಯನಿಗೆ ಪಾಠ ಕಲಿಸಲು ನಿರಾಕರಿಸಿದ್ದ ಆದರೆ ಇಲ್ಲಿ ಫಾದರ್ ಚಸರಾ ನಾ ಕೇಳದೆಯೇ,ನನಗರಿವಿಲ್ಲದೆಯೇ ಅನೇಕ ಪಾಠಗಳನ್ನು ಕಲಿಸಿದ್ದಾರೆ.
ಈಗೀಗ ಅವರನ್ನು ನೋಡಲಾಗಲಿಲ್ಲವಲ್ಲ ಎಂಬ ಕೊರಗು ನನಗಿಲ್ಲ.ಏಕೆಂದರೆ ಚಸರಾ ಇನ್ನೂ ಹಲವಾರು ದಶಕಗಳಿಗಾಗುವಷ್ಟು ಅಮೂಲ್ಯವಾದ ಜೀವನ ಪಾಠವಿರುವ ಪುಸ್ತಕಗಳನ್ನು ರಚಿಸಿ ಹೋಗಿದ್ದಾರೆ.ಅವರ ಪ್ರತಿ ವಾಕ್ಯವನ್ನು ಓದುವಾಗ ನನಗನಿಸುವುದು ಈತ ವ್ಯವಸ್ಥೆಯೊಳಗಿದ್ದು,ಅದರ ಭಾಗವಾಗಿದ್ದುಕೊಂಡೆ ಇಷ್ಟು ಮುಕ್ತ ಮನಸ್ಸಿನಿಂದ ವಿಷಯಗಳನ್ನು ಚರ್ಚಿಸಿದ್ದಾರೆಂದರೆ ಅವರಿಗಿದ್ದ ಸ್ಪಷ್ಟತೆ ಹಾಗು ಎದೆಗಾರಿಕೆ ಎಂತದ್ದು! ಇನ್ನು ಫಾದರ್ ಚಸರಾ ಧರ್ಮಗುರುವಾಗದೇ ಹೋಗಿದ್ದಲ್ಲಿ ಖಂಡಿತ ನಮ್ಮ ದೇಶದ ಅತ್ಯುತ್ತಮ ಲೇಖಕ,ಚಿಂತಕರ ಸಾಲಿನಲ್ಲಿರುತ್ತಿದ್ದರು.
ಫಾದರ್ ಚಸರಾರನ್ನು ಕೇವಲ ಒಬ್ಬ ಬಂಡಾಯಗಾರನಾಗಿ ಅಥವ ನಿಷ್ಟುರವಾದಿಯನ್ನಾಗಿ ನೋಡುವ ಮುನ್ನ ಅವರ ಪುಸ್ತಕಗಳನ್ನು ಓದಿದಾಗಾಲೇ ತಿಳಿಯುವುದು ಆತ ಒಬ್ಬ ಛಲವಾದಿಯಷ್ಟೆಯಲ್ಲ,ಒಬ್ಬ ಅಪ್ಪಟ ಮಾನವತಾವಾದಿ.ಬದುಕಿನ ವಿವಿಧ ಮಜಲುಗಳ ಬಗ್ಗೆ ತೀವ್ರತೆಯಿಂದ ಬರೆದ ಅವರು ಎಂದಿಗೂ ಸಿದ್ಧಾಂತಗಳ ವಿಚಾರದಲ್ಲಿ ರಾಜಿಮಾಡಿಕೊಂಡ ಉದಾಹರಣೆಗಳಿಲ್ಲ.ಬದುಕನ್ನು ಕೇವಲ ಬದುಕುವುದು ಜೀವನವಲ್ಲ ಬದಲಿಗೆ ಪ್ರತಿಕ್ಷಣವನ್ನೂ ಅನುಭವಿಸ ಬೇಕೆಂದು ಹೇಳಿಕೊಟ್ಟವರು ಚಸರಾ.ತೀರಾ ಕೆಟ್ಟವರಲ್ಲೂ ಒಳ್ಳೆಯ ಗುಣಗಳನ್ನು ಕಂಡಾಗ ಮುಕ್ತ ಮನಸ್ಸಿನಿಂದ ಅವರನ್ನು ಮೆಚ್ಚಿಕೊಳ್ಳುತ್ತಿದ್ದರು.ದಮನಿತರ ದನಿಯಾಗಿದ್ದ ಚಸರಾ ಕೊನೆಗೆ ವ್ಯವಸ್ಥೆಯ ಪಿತೂರಿಯಿಂದ ನೊಂದುಕೊಂಡು "ಸ್ವಾರ್ಥ,ದ್ವೇಷ,ರೋಷ"ಗಳಿಲ್ಲದ ನಾಡಿಗೆ ಸಮಯಕ್ಕೂ ಮುನ್ನ ಪಯಣಿಸಿದ್ದು ಕೇವಲ ಕ್ರೈಸ್ತ ಜಗತ್ತಿಗೆ ಮಾತ್ರವಲ್ಲ ನಮ್ಮ ನಾಡಿನ ಪ್ರಜ್ಞಾವಂತ,ವಿಚಾರವಾದಿ ಹೃದಯಗಳ ಪಾಲಿಗೆ ನುಂಗಲಾರದ ತುತ್ತಾಯಿತು.
No comments:
Post a Comment