Tuesday, February 28, 2017

ನನ್ನ ಮೆಚ್ಚಿನ ಫಾ.ಚಸರಾ ಗೀತೆಗಳು - ಭಾಗ 7 - "ಎಲ್ಲೋ ಒಂದು ಲೋಕವಿದೆ ನಮ್ಮ ಮುಂದಿನ ಬದುಕು ಅಲ್ಲಿದೆ"


ಫಾ.ಚಸರಾರವರ "ಎಲ್ಲೋ ಒಂದು ಲೋಕವಿದೆ ನಮ್ಮ ಮುಂದಿನ ಬದುಕು ಅಲ್ಲಿದೆ" ಗೀತೆಯ ಜನಪ್ರಿಯತೆಯ ಬಗ್ಗೆ ನಾನು ಹೆಚ್ಚು ಹೇಳುವಂತಾದೇನಿಲ್ಲ. ಆದರೆ ಅವರ ಗೀತೆಗಳಲ್ಲಿ ಅತ್ಯಂತ ಭಾವಪೂರ್ಣ ಗೀತೆಗಳಲ್ಲಿ ಇದು ಮೊದಲ ಸಾಲಿನಲ್ಲಿ ನಿಲ್ಲುವುದರಲ್ಲಿ ಸಂದೇಹವಿಲ್ಲ.

ಹಾಗೇ ನೋಡಿದರೆ ಮೇಲ್ನೋಟಕ್ಕೆ ಈ ಗೀತೆ ಒಂದು ವಿಷಾದ ಗೀತೆಯಂತೆ ಕಂಡು ಬಂದರೂ, ಭರವಸೆಯ ಪ್ರತೀಕದ ಗೀತೆಯಂದೇ ಹೇಳಬಹುದು. ಈ ಲೋಕದ ಎಲ್ಲವೂ, ಎಲ್ಲರೂ ನಮ್ಮ ಕೈ ಬಿಟ್ಟರೂ, ದೇವರೊಬ್ಬರಿದ್ದರೆ ಸಾಕು ಎಂಬ ಆಶಯ ಒಂದು ಕಡೆ ಇದೆ. ಆದರೆ ಗೀತೆಯ ಪ್ರಮುಖ ಭಾವವೆಂದರೆ ಈ ಲೋಕ, ಈ ಲೋಕದ ಜಂಜಾಟವೆಲ್ಲವೂ ಮುಂದಿನ ಲೋಕದ ಅಗಾಧತೆಯ ಮುಂದೆ ಕ್ಷಣಿಕ ಎಂಬುದು. ಈ ಅಗಾಧತೆ ಇರುವುದು ಕೇವಲ ಗಾತ್ರ, ಸಮಯದ ಅಳತೆಗೋಲಿನಲ್ಲಲ್ಲ , ಆದರೆ ಅಲ್ಲಿನ ಮೌಲ್ಯಗಳಲ್ಲಿ. ದ್ವೇಷ-ರೋಷ, ಸ್ವಾರ್ಥ-ಮೋಸಗಳ ಸಣ್ಣತನಗಳನ್ನು ಮೀರಿದ ಅಗಾಧ ಪ್ರೀತಿಯ ಲೋಕ ಅದು ಎಂಬುದನ್ನು ಕೇವಲ ಎರಡು ಆರಂಭಿಕ ಸಾಲುಗಳಲ್ಲಿ ಅದ್ಭುತವಾಗಿ ಹಿಡಿದಿಡುತ್ತದೆ ಗೀತೆ.


ಗೀತೆಯಲ್ಲಿ ಫಾ.ಚಸರಾರ ಸಾಹಿತ್ಯ  ಎಂದಿನಂತೆ ಸರಳವಾದರೂ ಗಾಢ ಹಾಗೂ ಆಳ. ತಮ್ಮದೇ ಅನುಭವವೇನೋ ಎಂದು ಪ್ರತಿ ಕೇಳುಗನಿಗೂ ಅನ್ನಿಸುವಷ್ಟು ಆತ್ಮೀಯ. ಸಂಗೀತ ಹಾಗೂ ರಾಗ ಸಂಯೋಜನೆ ಪ್ರವೀಣ್ ಸ್ಟೀಫನ್ ದತ್ತ್ ರವರದಾಗಿದ್ದೂ, ಅಚ್ಚರಿ ಎಂಬಂತೆ ಅವರದೇ ದನಿ ಗೀತೆಗೆ ಲಭಿಸಿದೆ. ಈ ರೀತಿಯ ಅಚ್ಚರಿಗಳನ್ನು ಪುಟ್ಟಣ್ಣ ಕಣಗಾಲ್ ತಮ್ಮ ಚಿತ್ರದ ಹಾಡುಗಳಲ್ಲಿ ನೀಡುತ್ತಿದ್ದದ್ದನ್ನು  ನಾವು ಗಮನಿಸಬಹುದು. ನಿಜಕ್ಕೂ ಸ್ಟೀಫನ್ ರವರ ಗಾಯನದಿಂದ ಈ ಗೀತೆಗೆ, ಸಂಗೀತ ಸಂಯೋಜನೆಗೆ, ಅದರಲ್ಲೂ ಗೀತೆಯ ಆಶಯ ಹಾಗೂ ಭಾವಕ್ಕೆ ಸಿಗಬೇಕಾದ ಮೌಲ್ಯ ಸಿಕ್ಕಿದೆ ಎಂದೇ ಹೇಳಬಹುದು. ಹಾಡಿನಲ್ಲಿ ಬಳಕೆಯಾಗಿರುವ ವಾದ್ಯ ಸಂಯೋಜನೆ, ವಾದ್ಯಗಳು, ಕೋರಸ್ ಎಲ್ಲವೂ ಕೇಳುಗರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುವಂತಿದೆ. ಫಾ.ಚಸರಾರವರ ಸಾಹಿತ್ಯ ಅವರದೇ ಸ್ವಗತವೇನೋ ಎನಿಸುವಷ್ಟು ಗಾಢ.

ಮೊದಲ ಚರಣದಲ್ಲಿ ಬರುವ ’ಅದೊಂದು ದೂರ ಪಯಣ’ ’ಅದೊಂದು ಕತ್ತಲ ದಾರಿ’ ಎಂಬ ಸಾಲುಗಳು, ಜೀವನದಲ್ಲಿ ಪ್ರತಿಯೊಬ್ಬರು ಎದುರಿಸುವ ಸವಾಲು, ನಡೆಸುವ ಹೋರಾಟದ ಪ್ರತೀಕದಂತಿದೆ. ದಾರಿಯ ಗುರಿ ಸೇರದೇ ಇದ್ದರೂ, ಸೋತರೂ ದೇವರೊಬ್ಬರಿದ್ದರೆ ಸಾಕು ಎಂಬ ಭಾವಕ್ಕೆ ನಿಲ್ಲದೆ, ದೇವರು ಸ್ಪರ್ಷಕ್ಕೆ ಸಿಗುವಷ್ಟು ಹತ್ತಿರವಿರಬೇಕು ಎಂಬ ಕಳಕಳಿಯ ಪ್ರಾರ್ಥನೆ ಇದೆ.   ಇನ್ನೂ ಎರಡನೆಯ ಚರಣದಲ್ಲಿನ ಸಾಲುಗಳು ಕಳೆದುಕೊಂಡ, ಕಳಚಿಕೊಂಡ ಗೆಳತನಕ್ಕೆ ಮರುಗುತ್ತಾ, ಆ ಗಾಯಕ್ಕೆ ದೈವ ಸಾಂತ್ವನದ ಲೇಪನವನ್ನು ಕೇಳಿಕೊಳ್ಳುತ್ತದೆ. ’ದೇವ ಬಾರ ನನ್ನ ಕರೆದೊಯ್ಯ ಬಾರ’ ಎಂಬುವಲ್ಲಿ ಸ್ಟೀಫನ್ ರವರ ಗಾಯನ ಮನಕಲಕ್ಕುವಂತಿದೆ.

ಈ ರೀತಿಯ ಹಾಡುಗಳ ಹುಟ್ಟು, ಹಿಂದಿನ ಸ್ಪೂರ್ತಿ, ಸಿದ್ಧತೆಗಳ ಬಗ್ಗೆ ನನಗದೂಂದು ತೀರದ ಕುತೂಹಲ.  ಇನ್ನೂ ಅನೇಕರದೂ ಇರಬಹುದು. ಇದೇ ಕುತೂಹಲದಿಂದ  ಗೀತೆಯಲ್ಲಿ ಪೂರ್ಣವಾಗಿ ಭಾಗಿಯಾಗಿದ್ದ ಸ್ಟೀಫನ್‍ರವರನ್ನು ಗೀತಯ ಬಗ್ಗೆ ಸಂಪರ್ಕಿಸಿದಾಗ, ಅನೇಕ ಆಸಕ್ತಿಕರ ವಿಷಯಗಳು ಹೊರಬಂದವು. ಅದನ್ನೇ ಸಂದರ್ಶನದ ರೂಪದಲ್ಲಿ ನಿಮ್ಮ ಮುಂದೆ ಇಡುವ ಪ್ರಯತ್ನ ಇಲ್ಲಿದೆ.

ಪ್ರಶ್ನೆ : ಈ ಗೀತೆಯ ಬಗ್ಗೆ ನಿಮ್ಮ ಹಾಗೂ ಫಾ.ಚಸರಾರವರ ಮೊದಲ ಮಾತುಕತೆಯ ನೆನಪುಗಳನ್ನು ಹೇಳಬಲ್ಲಿರಾ?

ಸ್ಟೀಫನ್ ದತ್ತ್ : 2002ರಲ್ಲಿ ಫಾ ಚಸರಾ ಈ ಗೀತಯೆನ್ನು ಒಳಗೊಂಡ ಧ್ವನಿಸುರಳಿಯ ಬಗ್ಗೆ  ನನ್ನನ್ನು ಸಂಪರ್ಕಿಸಿದರು. ಸಾಮಾನ್ಯವಾಗಿ ಹಾಡುಗಳ ಹಿನ್ನಲೆ ಸಂಗೀತವನ್ನು ನಾನು ಮನೆಯಲ್ಲೇ ಸಂಯೋಜಿಸುತ್ತೇನೆ. ಇದರಿಂದ ಸ್ಟುಡಿಯೋ ಸಮಯ ಉಳಿತಾಯವಾಗುತ್ತದೆ. ಫಾ.ಚಸರಾರವರ ಗೀತೆಗಳಿಗೆ ಸಂಯೋಜನೆ ಮಾಡುವಾಗಲೆಲ್ಲಾ ಅವರ ಜೊತೆ ಅಧ್ಯಾತ್ಮಿಕ ಹಾಗೂ ತತ್ವದ ವಿಷಯದಲ್ಲಿ ಸುಂದರವಾದ ಮಾತುಕತೆ ನಡೆಯುತ್ತಿತ್ತು.

ಪ್ರಶ್ನೆ : ಈ ಗೀತೆಯ ಸಂಯೋಜನೆ ಹೇಗೆ ಪ್ರಾರಂಭವಾಯಿತು?

ಸ್ಟೀಫನ್ ದತ್ತ್ : ಫಾದರ್ ರವರ ಅತ್ಯಂತ ಸುಂದರ ರಚನೆಗಳಿಗೆ ಸಂಗೀತ ಸಂಯೋಜನೆ ಮಾಡುವ ಸದವಕಾಶ ನನಗೆ ದೊರಕಿದೆ. ಅವರ ಅನೇಕ ಗೀತೆಗಳು ನನ್ನ ಅಚ್ಚುಮೆಚ್ಚಿನದವು. ಅದರಲ್ಲೂ ’ತಂದೆಯು ನೀನೇ, ತಾಯಿಯು ನೀನೇ’, ’ನೀನೆ ನೀನೆ’, ’ಎಲ್ಲೋ ಒಂದು ಲೋಕವಿದೆ’ ನನ್ನ ಮೆಚ್ಚಿನವು. ಸಾಮಾನ್ಯವಾಗಿ ಫಾ.ಚಸರಾ ಮೊದಲೆರೆಡು ಸಾಲುಗಳಿಗೆ ರಾಗ ರಚನೆ ಮಾಡುತ್ತಿದ್ದರು. ನಾನು ಮುಂದಿನದನ್ನು ಸಂಯೋಜಿಸಿ ಗೀತೆಯನ್ನು ಪೂರ್ಣಗೊಳಿಸುತ್ತಿದ್ದೆ. ಈ ಧ್ವನಿಸುರಳಿಯ ರಾಗ  ಸಂಯೋಜನೆ ಮಾಡುತ್ತಿದ್ದಾಗ, ಈ ಗೀತೆಯ ಅಶಯವೇನಿರಬಹುದು ಎಂಬ ಆಲೋಚನೆ ನನ್ನಲ್ಲಿತ್ತು. ಫಾ.ಚಸರಾ ಒಂದು ಕಾಗದದ ಮೇಲೆ ಗೀತೆಯ ಮೊದಲೆರೆಡು ಸಾಲುಗಳನ್ನು ಬರೆದುಕೊಟ್ಟರು. ಅದರಲ್ಲಿ ’ಎಲ್ಲೋ ಒಂದು ಲೋಕವಿದೆ ನನ್ನ ಮುಂದಿನ ಜನುಮ ಅಲ್ಲಿದೆ’ ಎಂಬ ಸಾಲುಗಳಿತ್ತು. ನಾನು ಅವರನ್ನು ನೋಡಿ, " ಈ ಹಾಡಿಗೆ ಈ ವಿಷಯವೇಕೆ ಫಾದರ್, ಸಾಹಿತ್ಯ ತುಂಬಾ ಆಳ ಹಾಗೂ ವಯ್ಯಕ್ತಿಕವಾದಂತಿದೆ"ಎಂದೆ.

ಅದಕ್ಕವರು "ಸ್ಟೀ, ವ್ಯವಸ್ಥೆಯೊಂದಿಗಿನ ಈ ಹೋರಾಟದಿಂದ ದಣಿದು ಹೋಗಿದ್ದೇನೆ. ಇದು ಸಾಕಾಗಿದೆ. ಇನ್ನೆಷ್ಟು ವರ್ಷಗಳು ಹೀಗೆ  ನಾನು ಈ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರಬೇಕಾಗಿದೆಯೋ? ಆದರೆ ಈ ದೀರ್ಘ ಸಂಘರ್ಷ ಜೀವನದ ನಂತರ ಕೇವಲ ಪ್ರೀತಿ ಶಾಂತಿ  ಮಾತ್ರವೇ ಇರುವ ಸ್ಥಳವೊಂದನ್ನು ನಾನು ಕಂಡುಕೊಳ್ಳುತ್ತೇನೆ ಎಂಬುದೇ ನನ್ನಗಿರುವ ಭರವಸೆ" ಎಂದರು. ಏನು ಹೇಳಬೇಕೆಂದು ನನಗೆ ತೋಚದೆ ರಾಗ ಸಂಯೋಜನೆಯನ್ನು ಪ್ರಾರಂಭಿಸಿದೆ.

ಪ್ರಶ್ನೆ: ಗೀತೆಯ ಬಗ್ಗೆ ಏನೆಲ್ಲಾ ಮಾತುಕತೆ, ರೂಪುರೇಷೆಗಳು ನಡೆಯಿತು? ಒಂದು ಜನಪ್ರಿಯ, ಅತ್ತ್ಯತ್ತಮ ಗೀತೆಯ ಹಿಂದಿನ ’ thought process' ಏನಿರುತ್ತದೆ ಎಂಬುದು ಈ ಪ್ರಶ್ನೆಯ ಆಶಯ.

ಸ್ಟೀಫನ್ ದತ್ತ್ : ಈ ಗೀತೆಗೆ ಬೇಕಾಗಬಹುದಾದ ಹಿನ್ನಲೆ ಸಂಗೀತದ ಬಗ್ಗೆ ನಾವಿಬ್ಬರು ಚರ್ಚಿಸಿದೆವು. ಯಾವ ವಾದ್ಯಗಳನ್ನೆಲ್ಲಾ ಬಳಸಬಹುದು, ಬಳಸಬೇಕು ಎಂಬುದು ಚರ್ಚೆಯಾಯಿತು. ಗೀತೆಯ ಗಾಢತೆ, ಅಧ್ಯಾತ್ಮಿಕತೆ ಹಾಗೂ ಭಾವ ತೀವ್ರತೆಯನ್ನು ಎತ್ತಿ ಹಿಡಿಯುಂತ ಸಂಗೀತವಿರಬೇಕೆಂಬುದು ಇಬ್ಬರ ಅಭಿಪ್ರಾಯವಾಗಿತ್ತು.  ಅದೇ ಕಾರಣದಿಂದ ಗೀತೆಯ ಆರಂಭದಲ್ಲಿ ವಯಲೀನ್ ಸೋಲೋ ಹಾಗೂ ಚರಣಗಳ ನಡುವೆ ಕೋರಸ್  ಬಳಸಿದೆ. ಫಾ.ಚಸರಾರವರಿಗೆ ಈ ಸೋಲೋ ವಾದ್ಯಗಳ ಬಳಕೆ ಬಹಳ ಇಷ್ಟವಾಗುತ್ತಿತ್ತು. ಹಿನ್ನಲೆ ಸಂಗೀತದಲ್ಲಿ ಒಂದೊಂದೇ ವಾದ್ಯವನ್ನು ಬಳಸಿ ಕಾಡುವ ಗುಣವುಳ್ಳ ಸಂಗೀತ ರಚನೆಯತ್ತ ಅವರಿಗೆ ಒಲವಿತ್ತು. ದೇವಾಲಯಗಳಲ್ಲಿ, ಗಾನ ವೃಂದಗಳಲ್ಲಿ ಕೀಬೋರ್ಡ್ ಸುಲಭವಾಗಿ ನುಡಿಸಲು ಸಾಧ್ಯವಾಗುವಂತ ರಾಗ ಸಂಯೋಜನೆಯನ್ನು ಮಾಡಲು ನನ್ನನ್ನು ಒತ್ತಾಯಿಸುತ್ತಿದ್ದರು.

ಪ್ರಶ್ನೆ: ಈ ಹಾಡನ್ನು ನೀವೇ ಹಾಡಬೇಕೆಂದು ನಿರ್ಧಾರವಾಗಿದ್ದು ಹೇಗೆ?ಏಕೆ?

ಸ್ಟೀಫನ್ ದತ್ತ್ : ಇದನ್ನು ನಿರ್ಧರಿಸಿದವರು ಫಾ.ಚಸರಾ ಹಾಗೂ ರೀಟಾ ರೀನಿ. ಗೀತೆಯ ಸಂಯೋಜನೆ ಮಾಡುವಾಗ ನಾನು ಇದನ್ನು ಭಾವ ಪೂರ್ಣವಾಗಿ ಹಾಡುತ್ತಿದ್ದದ್ದನ್ನು ನೋಡಿ ಇವರಿಬ್ಬರು ಈ ನಿರ್ಧಾರಕ್ಕೆ ಬಂದರೇನೋ. ಹಾಡಿಗೆ ಅದರ ಭಾವಕ್ಕೆ, ಆಶಯಕ್ಕೆ, ನನ್ನ ಗಾಯನದ ಶೈಲಿಯಿಂದ ನ್ಯಾಯ ಸಿಗಬಹುದೆಂದು ಅವರಿಗೆ ಅನಿಸಿರಬೇಕು.

ಪ್ರಶ್ನೆ: ಈ ಹಾಡಿನ ರೆಕಾರ್ಡಿಂಗ್ ಆದ ನಂತರ ಬಂದ ಪ್ರತಿಕ್ರಿಯೆ ಹೇಗಿತ್ತು?

ಸ್ಟೀಫನ್ ದತ್ತ್ : ಈ ಗೀತೆಯನ್ನು ಆಗ ಅರವಿಂದ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿದೆವು. ಸಂಜೆ ಸುಮಾರು 7 ಗಂಟೆಗೆ ನಾನು ಈ ಗೀತೆಯನ್ನು ಹಾಡಲು ಪ್ರಾರಂಭಿಸಿದೆ. ಗೀತೆಯನ್ನು ರೆಕಾರ್ಡ್ ಮಾಡಿದ ನಂತರ ಸ್ಟುಡಿಯೋದಲ್ಲೇ ನಾವೆಲ್ಲಾ ಸೇರಿಕೊಂಡು ಸುಮಾರು ನಾಲ್ಕೈದು ಸಲ ಹಾಡನ್ನು ಕೇಳಿದೆವು. ಫಾ.ಚಸರಾ ಹಾಗೂ ರೀನಿಯವರಿಗೆ ಹಾಡು ಬಹಳ ಇಷ್ಟವಾಯಿತು. ಫಾ.ಚಸರಾ ನನ್ನ ಬಳಿ "ಸ್ಟೀ, ಬಹಳ ಉತ್ತಮವಾದ ಸಂಯೋಜನೆ, ಇದು ನಿಜಕ್ಕೂ ಬಹಳ ಜನಪ್ರಿಯವಾಗುತ್ತದೆ" ಎಂದರು. ನಾನು ಫಾ.ಚಸರಾರವರಿಗೆ ಇದು ಅವರ ಅತ್ತ್ಯುತ್ತಮ ಸಾಹಿತ್ಯದಲ್ಲಿ ಒಂದು ಎಂದು ಹೇಳಿದೆ. ಸಿಡಿ ಬಿಡುಗಡೆಯಾದ ನಂತರ ಒಂದು ದಿನ ಫಾದರ್ ನನಗೆ ಫೋನ್ ಮಾಡಿದರು. "ಸ್ಟೀ, ಈ ಹಾಡು ಎಲ್ಲರಿಗೂ ಇಷ್ಟವಾಗಿದೆ. ನಮ್ಮ ಧರ್ಮಕೇಂದ್ರದ ಅನೇಕರು 'ಈ ಹಾಡನ್ನು ಕೇಳುವಾಗ ಅತ್ತುಕೊಂಡೆವು' ಎಂದು ನನ್ನ ಬಳಿ ಹೇಳಿದರು. ಈ ಹಾಡು ಅನೇಕರ ಹೃದಯಗಳನ್ನು ಮುಟ್ಟಿದೆ ಎನ್ನುವುದು ನಿಜಕ್ಕೂ ಒಳ್ಳೆಯ ಸೂಚನೆ" ಎಂದರು. ಆಗ ಫಾದರ್ ತುಮಕೂರಿನಲ್ಲಿದ್ದರು.

ಪ್ರಶ್ನೆ : ಈ ಹಾಡಿನ ಬಗ್ಗೆ ನಿಮ್ಮ ವ್ಯಯಕ್ತಿಕ ಅಭಿಪ್ರಾಯವೇನು?

ಸ್ಟೀಫನ್ ದತ್ತ್ : ಫಾ.ಚಸರಾರವರ ನನ್ನ ಅತ್ಯಂತ ಮೆಚ್ಚಿನ ಗೀತೆಗಳಲ್ಲಿ ಇದು ಒಂದು. ಸಾಹಿತ್ಯದಲ್ಲಿನ ಆಳ ಹಾಗೂ ಗಾಢತೆ ಇದಕ್ಕೆ ಕಾರಣ. ಈ ಗೀತೆಯಲ್ಲಿ ಅವರು ವ್ಯಕ್ತಪಡಿಸಿರುವ ಅನಿಸಿಕೆಗಳು ನಿಜಕ್ಕೂ ಸತ್ಯ. ಈ ರೀತಿಯ ಸಾಹಿತ್ಯ ಏಕೆ ಬರೆದರು ಎಂದು ಅನೇಕ ಸಲ ಯೋಚಿಸಿದ್ದೇನೆ. ಆ ಹಾಡು ಕೇಳಿದಾಗಲ್ಲೆಲ್ಲಾ ನನ್ನಲೊಂದು ಹೊಸ ಚೈತನ್ಯ ಹಾಗೂ ಭರವಸೆ ಮೂಡುತ್ತದೆ. ಇದೇ ಅನುಭವ ಕೇಳುಗರಿಗೆಲ್ಲಾ ಆಗುತ್ತದೆ ಎಂಬುದು ನನ್ನ ಅಭಿಪ್ರಾಯ. ಇಷ್ಟು ಬೇಗ ಚಸರಾ ನಮ್ಮನ್ನು ಅಗಲಿ ಅವರಿಗಿಷ್ಟವಾದ ’ಆ ಲೋಕಕ್ಕೆ’ ಹೊರಟು ಬಿಡುತ್ತಾರೆ ಎಂದು ನಾನು ಎಣಿಸಿರಲಿಲ್ಲ. ಈ ಗೀತೆ ಕೇಳಿದಾಗಲೆಲ್ಲಾ ನಾನು ಕಣ್ಣೀರಾಗುತ್ತೇನೆ. ಆ ಹಾಡಿಗೆ ಪಾಶ್ಚಿಮಾತ್ಯ ಶೈಲಿಯ Orchestral music ಮಾಡಿ ಅದಕ್ಕೊಂದು ವಿಡಿಯೋ ಮಾಡಬೇಕೆಂಬ ಯೋಜನೆ ನನ್ನದು. ಆದಷ್ಟು  ಬೇಗ ಕಾರ್ಯರೂಪಕ್ಕೆ ತರುವ ಭರವಸೆಯಲ್ಲಿದ್ದೇನೆ.


ಇದಿಷ್ಟು ನಮ್ಮ ಪ್ರಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಸ್ಟೀಫನ್ ದತ್ತರವರು ಈ ಹಾಡಿನ ಬಗ್ಗೆ ಹಂಚಿಕೊಂಡ ಅನುಭವ. ಇದನ್ನು ಓದಿ ಮತ್ತೊಮ್ಮೆ ಹಾಡನ್ನು ಕೇಳಿದಾಗ, ಸ್ಟೀಫನ್ ರವರು ಹಂಚಿಕೊಂಡಿರುವ ವಿವರಗಳೆಲ್ಲಾ ವಿಸ್ತಾರವಾಗಿ ಅರ್ಥವಾಗುತ್ತದೆ. ಅದಕ್ಕೂ ಮಿಗಿಲಾಗಿ ಹಾಡನ್ನು ಒಮ್ಮೆ ಒಳ್ಳೆಯ ಹೆಡ್ ಫೋನ್ ಹಾಕಿ ಯಾವುದೇ ಅಡಚಣೆ ಇಲ್ಲದೆ ಕೇಳಿ ನೋಡಿ. ಸಾಹಿತ್ಯ ಹಾಗೂ ವಾದ್ಯ ಸಂಯೋಜನೆಯಲ್ಲಿನ ಮಾಧುರ್ಯತೆ ಹೃದಯ ತುಂಬಿಕೊಳ್ಳುತ್ತದೆ.  

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ’ಅಗೋ ನೋಡಿ ಅಗೋ ನೋಡಿ ಸಾಗುತ್ತಿಹರು ಕ್ರಿಸ್ತರು’


ಸಂವೇದ್ಯ ಧ್ವನಿಸುರಳಿಯ ’ಅಗೋ ನೋಡಿ ಅಗೋ ನೋಡಿ ಸಾಗುತ್ತಿಹರು ಕ್ರಿಸ್ತರು’ ಮತ್ತೊಂದು ಸುಂದರ ಗೀತೆ. ಕ್ರಿಸ್ತನ  ಕೊನೆಯ ಪಯಣದ ದೃಶ್ಯಗಳಂತೂ ಚಿತ್ರದ ಹೈಲೈಟಾಗಿ ಮೂಡಿ ಬಂದಿದೆ. ಯೇಸು ಬಂಧನಕೊಳ್ಳಗಾಗಿ ಶಿಲುಬೆಯನ್ನು ಹೊತ್ತುಕೊಂಡು ಹೋಗುವುದನ್ನು ಹೇಳುವ ಹಾಡಿನ ರೂಪ. ಜೆರುಸಲೇಮ್ ನಗರಕ್ಕೆ ಯೇಸುವನ್ನು ಹುಡುಕಿಕೊಂಡು ಬಂದ ಹೊಸಬನೊಬ್ಬ ಅಲ್ಲಿನ ಸ್ಥಳೀಯನನ್ನು  "ಯೇಸು ಎಲ್ಲಿ"? ಎಂದು ಕೇಳಿದರೆ, ಎಲ್ಲವನ್ನೂ ಬಲ್ಲ ಮತ್ತೊಬ್ಬ  ಕ್ರಿಸ್ತನನ್ನು ತೋರಿಸಿಕೊಂಡು ಹೇಳುವಂತಿದೆ ಈ ಹಾಡು.

೧೯೫೯ರಲ್ಲಿ ಬಿಡುಗಡೆಯಾದ ಬೆನ್‍ಹರ್ ಚಿತ್ರದಲ್ಲಿ ಇದೇ ರೀತಿಯ ದೃಶ್ಯ ಚಿತ್ರದ ಕೊನೆಯ ಭಾಗದಲ್ಲಿ ಬರುತ್ತದೆ. ಅದು ಯೇಸು ಕ್ರಿಸ್ತನನ್ನು ಶಿಲುಬೆಗೇರಿಸುವ ದೃಶ್ಯಗಳು.  ಯೇಸುವಿನ ಕಾಲಘಟ್ಟದವನೇ ಆದ ಬೆನ್‍ಹರ್ ನ ಕಥೆಯಾದ ಈ ಚಿತ್ರದಲ್ಲಿ ಯೇಸು ಕ್ರಿಸ್ತ  ಕೆಲವೇ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ.  ಕಥಾನಾಯಕ ಬೆನ್‍ಹರ್ ತನ್ನ ವಿರೋಧಿಗಳ ಸಂಚಿಗೆ ಬಲಿಯಾಗಿ, ತನ್ನ ದೇಶದಿಂದ ದೂರವಾಗುವ ಸಂದರ್ಭ ಬಂದಿರುತ್ತದೆ.  ಮತ್ತೆ ಮರಳಿ ಬರುವಷ್ಟರಲ್ಲಿ ತಾಯಿ ಹಾಗೂ ತಂಗಿ ಕುಷ್ಠ ರೋಗದಿಂದ ಬಳಲುತ್ತಿರುತ್ತಾರೆ.  ನಜರೇತಿನ ಯೇಸು ಕುಷ್ಠ ರೋಗದವರನ್ನು ಗುಣಪಡಿಸುತ್ತಾರೆ ಎಂದು ಬೆನ್‍ಹರ್ ನ ಹೆಂಡತಿ ಹೇಳುತ್ತಾಳೆ. ಇದೇ ನಂಬಿಕೆಯಿಂದ ಯೇಸುವನ್ನು ಕಾಣುವ ತವಕದಲ್ಲಿ ಇಡೀ ಕುಟುಂಬ ಜೆರುಸಲೇಮ್ ನಗರಕ್ಕೆ ಬರುತ್ತದೆ. 


ಇಡೀ ಜೆರುಸಲೇಮ್ ನಗರದ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದೆ. ಅದೇ ದಿನ ಯೇಸುವಿನ ಬಂಧನವಾಗಿಪಿಲಾತನ ತೀರ್ಪಿನ ಪ್ರಕಾರ ಯೇಸುವನ್ನು ಕಪಾಲ ಬೆಟ್ಟಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ.  ಎಲ್ಲರೂ ಕ್ರಿಸ್ತನನ್ನು ಶಿಲುಬೆಗೇರಿಸುವ ಸ್ಥಳದಲ್ಲಿ ಸೇರಿದ್ದಾರೆ.  ಬಿಕ್ಷೆ ಬೇಡುವವನೊಬ್ಬ ಜನರೆಲ್ಲಾ ಯೇಸುವಿನ ವಿಚಾರಣೆಯನ್ನು ನೋಡಲು ಹೋಗಿದ್ದರೆ ಎಂದು ಹೇಳುತ್ತಾನೆ. ’ಅಗೋ ನೋಡಿ’ ಗೀತೆಯ ಸಂದರ್ಭವೂ ಅಂತಹುದೇ. 

ಯೇಸು ಭಾರವಾದ ಶಿಲುಬೆಯನ್ನು ಹೊತ್ತುಕೊಂಡು ಹೋಗುವ ಸಂದರ್ಭದಲ್ಲಿ ಬೆನ್‍ಹರ್ ‍ನ ಕುಟುಂಬ ಯೇಸುವನ್ನು ನೋಡುತ್ತದೆ. ಬಹಳ ಸಂಭಾಷಣೆಗಳಿಲ್ಲದ ಈ ದೀರ್ಘ ದೃಶ್ಯಗಳಲ್ಲಿ ಹಿನ್ನಲೆ ಸಂಗೀತ ಹಾಗೂ ಶಬ್ದಗ್ರಹಣೆ ಅದ್ಭುತವಾಗಿದೆ. ೬೦ ವರ್ಷಗಳು ಕಳೆದರೂ ಈ ಚಿತ್ರದ ಹಿನ್ನಲೆ ಸಂಗೀತ ಇನ್ನೂ ಜನಪ್ರಿಯವಾಗಿದೆ. ಈ ದೃಶ್ಯಗಳಿಗೇನಾದರೂ ಕನ್ನಡದ ಯಾವುದಾದರೂ ಹಾಡು ಬಳಸಬಹುದೇನೋ ಎನ್ನಬಹುದಾದರೆ, ಅದು ’ಅಗೋ ನೋಡಿ’ ಗೀತೆ ಎನ್ನಬಹುದು. ’ಆಗೋ ನೋಡಿ’ ಯ ವಾದ್ಯ ಸಂಯೋಜನೆಗೂ ಆ ದೃಶ್ಯಗಳ ಹಿನ್ನಲೆ ಸಂಗೀತಕ್ಕೂ ಒಂದು ರೀತಿಯ ಸಾಮ್ಯತೆಯೂ ಇದೆ.


ಮರಿಯಾಪುರಾ ಮಹಿಮೆ ನಾಟಕದಲ್ಲಿ ಬಳಕೆಯಾದ ಗೀತೆಯಾದುದರಿಂದ ಈ ಗೀತೆಗೆ ಒಂದು ನಾಟಕೀಯತೆಯ, ಮೆಲೋಡ್ರಾಮದ ಸ್ಪರ್ಷವಿದೆ. ಶಿಲುಬೆಯನ್ನು ಹೊತ್ತು ಕೊಂಡು ಹೋಗುತ್ತಿರುವ ಕ್ರಿಸ್ತನ ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ಒತ್ತಿ ಹೇಳುವಂತೆ ಇದೆ ಈ ಗೀತೆ. ಹಾಗೇ ನೋಡಿದರೆ ಕ್ರಿಸ್ತನ ಇಡೀ ಜೀವನವೇ ಶಿಲುಬೆಯತ್ತ ಪಯಣವೇ ಎನ್ನಬಹುದು. ಅನ್ಯಾಯದ, ದಬ್ಬಾಳಿಕೆಯ ವಿರುದ್ಧ ಧ್ವನಿಯಾದಾಗಲೇ ಸಾವು ಖಚಿತವಾದರೂ ಎಡಬಿಡದೆ ನೊಂದವರ ಪರ ದನಿಗೂಡಿಸಿದವರು ಯೇಸು. ಆ ನಿಟ್ಟಿನಲ್ಲಿ ನೋಡಿದರೆ ಕ್ರಿಸ್ತ ಮೊದಲಿನಿಂದಲೂ ಶಿಲುಬೆಯತ್ತ ಸಾಗಿದವರೇ, ತಮ್ಮ ಶಿಷ್ಯರಿಗೂ, ಹಿಂಬಾಲಕರಿಗೂ ಶಿಲುಬೆಯನ್ನು ಹೊರಲು ಕರೆಕೊಟ್ಟವರು ಅವರು.

ಹೀಗೆ ಕೊನೆಯ ಯೇಸುವಿನ  ಕೊನೆಯ ಪಯಣವನ್ನು ತೋರಿಸುತ್ತಾ ಸಾಗುವ ಗೀತೆ ಮೊದಲೇ ಹೇಳಿದಂತೆ ಯೇಸುವಿನ ಬಳಲಿಕೆಯನ್ನು ಒತ್ತಿ ಹೇಳುತ್ತದೆ. ಈ ಬಳಲಿಕೆ ಕಾರಣಗಳನ್ನು ಪಲ್ಲವಿಯಲ್ಲಿನ ಸಾಹಿತ್ಯವೇ ಹೇಳುತ್ತದೆ. ದಣಿದ ದೇಹಕ್ಕಿಂತ ಯೇಸುವಿನ ನೊಂದ ಮನಸ್ಸು ಹಾಗೂ ಬೆಂದ ಹೃದಯವೇ ಆ ಬಳಲಿಕೆಗೆ ಕಾರಣವೇನೋ.

ಇನ್ನೂ ಚರಣದಲ್ಲಿ ಹೇಗೆ ಸ್ವಂತ ಜನರೇ ಯೇಸುವಿಗೆ ಮುಳುವಾದರು ಎಂಬುದನ್ನು ಹೇಳುತ್ತದೆ. ಮುತ್ತಿಟ್ಟು ತೋರಿಸಿಕೊಟ್ಟ ಶಿಷ್ಯ, ನಾನರಿಯೇ ಎಂದು ನಿರಾಕರಿಸಿದ  ಮತ್ತೊಬ್ಬ ಆಪ್ತ ಶಿಷ್ಯ, ಬಂಧನಕ್ಕೊಳಗಾಗುತ್ತಿದ್ದಂತೆ ದಿಕ್ಕಾಪಾಲಾಗಿ ಹೋದ ಇನ್ನಿರರು, ಬರಬ್ಬಾಸನನ್ನು ಬಿಟ್ಟು ಬಿಡಿ ಎಂದ ಜನರು ಎಲ್ಲರೂ ಇದರಲ್ಲಿ ಭಾಗಿಗಳೇ. ಅಷ್ಟು ಮಾತ್ರವಲ್ಲದೆ ಬೋಧನೆ ಕೇಳಿದ, ಅದ್ಭುತಗಳಿಂದ ಉಪಯೋಗ ಪಡೆದ ಜನರು ಸಹಾ ಯಾವುದೇ ರೀತಿಯ ಸಹಾಯಕ್ಕೆ ಬಾರದೇ ಹೋದರು. ಇದಲ್ಲವೂ ಯಾವುದೇ ವ್ಯಕ್ತಿಯನ್ನು ವಿಚಲಿತರನ್ನಾಗಿ ಮಾಡಬಹುದು. ಯೇಸು ಸಹಾ ಇದಕ್ಕೆ ಹೊರತಾಗಿರಲಿಲ್ಲ ಎಂಬ ಸಂದೇಶ ಇಲ್ಲಿದೆ. ಇಲ್ಲಿ ಮತ್ತೊಮ್ಮೆ ಅತ್ಯಂತ ಪರಿಣಾಮಕ್ಕಾರಿಯಾದ ರೂಪಕವನ್ನು ಬಳಸಲಾಗಿದೆ. ನೆರಳು, ಫಲ ನೀಡಬೇಕಾದ ಮನೆಯ ಬಳ್ಳಿ, ಕೊರಳ ಸುತ್ತಿಕೊಳ್ಳುವ ಅದೂ ತಪ್ಪಿಸಿಕೊಳ್ಳಲಾಗದ ವಿಷದ ಪಾಶವಾಗುವ ರೂಪಕ, ಜನರ ಮೋಸದ ಘೋರತೆಯನ್ನು ಸೂಚಿಸುತ್ತದೆ.

ಎರಡನೆಯ ಚರಣ ಮತ್ತಷ್ಟು ಆಳವಾಗಿದೆ.  ಸ್ವರ್ಗದಿಂದ ಭೂಮಿಗೆ ಬಂದ ಅರಸನು ಭೂಮಿಗೆ ಸ್ವರ್ಗದ ಸ್ಪರ್ಷವನ್ನು ನೀಡಬಹುದಿತ್ತೇನೋ. ಆದರೆ ಮನುಜರ ಸ್ವಾರ್ಥದಿಂದ ನರಕವನ್ನು ನೋಡುವಂತಾಯಿತು. ಸ್ವರ್ಗದ ವರವನ್ನು ನೀಡಬಹುದಾದವರೇ ಘೋರ ಮರಣದ ಶಾಪವನ್ನು ಪಡೆದರು. ಪ್ರೀತಿ ಕ್ಷಮೆಯನ್ನು ಪಡೆದ ಜನರು ಪ್ರೀತಿಯನ್ನು ಹಂಚುವ ಬದಲು, ಕ್ಷಮಾಗುಣವನ್ನು ಹೊಂದುವ ಬದಲು ಕಟುಕಾರದ ದ್ವಂದ್ವಗಳತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ.


ಮಹಿಮೆಯಲ್ಲಿ ಈ ಹಾಡು ಒಂದು ರೀತಿಯ ಶಿಲುಬೆ ಹಾದಿ. ಯೇಸುವಿನ ಯಾತನೆಯನ್ನು ಬಹಳ ಪರಿಣಾಮಕ್ಕಾರಿಯಾಗಿ ತೋರಿಸಲು ಬಳಕೆಯಾಗಿರುವ ಈ ಹಾಡು ನಿಜಕ್ಕೂ ನೋಡುಗರ ಮನವನ್ನು ಕಾಡುತ್ತದೆ. ಸಾಹಿತ್ಯ ಸಂಗೀತ ದೃಶ್ಯ ರೂಪಗಳ ಸಮರ್ಥ ಸಂಗಮಕ್ಕೆ ಉದಾಹರಣೆಯಾಗಿದೆ ಈ ಹಾಡು.

Monday, January 30, 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಬೆಳಕು ಹರಿಯಿತು ಭುವಿಯ ಕಡೆಗೆ

ಸ್ಪೂರ್ತಿ ಎಂಬ ಸೂಪರ್ ಹಿಟ್ ಧ್ವನಿಸುರಳಿಯ ಮತ್ತೊಂದು ಸೂಪರ್ ಹಿಟ್ ಗೀತೆ ’ಬೆಳಕು ಹರಿಯಿತು’ ಗೀತೆ. ಇಡೀ ೯೦ರ ದಶಕದಲ್ಲಿ (೨೦೦೦ ದಶಕದ ಮಧ್ಯದವರೆಗೂ) ಯಾವುದೇ ಕನ್ನಡ ಕ್ರೈಸ್ತ ಗಾಯನ ಸ್ಪರ್ಧೆಯಲ್ಲಿ ಇದು ಖಾಯಂ ಗೀತೆ. ಕೆಲವೊಮ್ಮೆ ಎರಡು ಮೂರು ತಂಡಗಳು ಇದೇ ಹಾಡನ್ನು ಹಾಡಿದ ಉದಾಹರಣೆಯೂ ಇದೆ. ಅದಕ್ಕೆ ಕಾರಣ ಸಾಹಿತ್ಯಕ್ಕಿಂತ ಇದರ ಅತ್ಯಾಕರ್ಷಕವಾದ ಶಾಸ್ತ್ರೀಯ ಮೂಲದ  ಸಂಗೀತ ಎಂದೇ ನನ್ನ ಭಾವನೆ. ಅದರಲ್ಲೂ ಸ್ಪರ್ಧೆಯಲ್ಲಿ ತೀರ್ಪುಗಾರರನ್ನು ಸೆಳೆಯಲು ಬೇಕಾದ  ಸ್ವರಪ್ರಸ್ತಾರ, ಹಿನ್ನಲೆ ಸಂಗೀತ ಹಾಡಲ್ಲಿದೆ. ಮೊದಲ ಸಲ ಕೇಳಿದಾಗಲೇ ಸೆಳೆಯುವಂತ ಗುಣ ಇದುದ್ದರಿಂದ ಕೇಳುಗಾರಾರ, ಹಾಡುಗಾರರ , ಗಾಯನ ವೃಂದಗಳ ಫೇವರೆಟ್ ಹಾಡು ಇದಾಗಿತ್ತು.

ಈ ಹಾಡನ್ನು ಕೇಳಿದಾಗಲೆಲ್ಲಾ ಇದು ಕ್ರಿ‍ಸ್‍ಮಸ್ ಗೀತೆಯೇ ಅಥವಾ ಸಾಧಾರಣ ಕಾಲದ ಗೀತೆಯೇ ಎಂಬ ಪ್ರಶ್ನೆ ಮೂಡುತ್ತದೆ. ಆಳವಾಗಿ ಕೇಳಿದಾಗ ಇದೊಂದು ಸಾರ್ವತ್ರಿಕವಾದ ಗೀತೆಯೇ ಎಂದೆನಿಸುತ್ತದೆ.  ಸಾಧಾರಣ ಕಾಲದಲ್ಲೂ ಹಾಡಬಹುದಾದ ಕ್ರಿಸ್‍ಮಸ್ ಗೀತೆಯೂ ಹೌದು ಅಥವಾ ಕ್ರಿಸ್‍ಮಸ್ ಸಮಯದಲ್ಲಿ ಹಾಡಬಹುದಾದ ಸಾಧಾರಣ ಕಾಲದ ಗೀತೆಯೂ ಹೌದು ಎನ್ನಬಹುದಾದ ವಿಶಿಷ್ಠ ಗೀತೆಯಿದು.


’ಭುವಿಪಾಲಕಂ ಸೃಷ್ಠಿ ಸಮಸ್ತಾಯ ಪೋಷಕಂ ಮನುಕುಲ ಸಮಸ್ತ ಪರಿಪಾಲಕಂ’ ಎಂಬ ಸುಮಧುರ ಶ್ಲೋಕದಿಂದ ಪ್ರಾರಂಭವಾಗುತ್ತದೆ ಈ ಹಾಡು.ಈ ಶ್ಲೋಕವನ್ನು ಕೇಳುತ್ತಿದ್ದಂತೆ 80ರ ದಶಕದಲ್ಲಿ ಕನ್ನಡ ಚಿತ್ರಗಳ, ಅದರಲ್ಲೂ ಡಾ.ರಾಜ್ ಚಿತ್ರಗಳ ಪ್ರಾರಂಭದಲ್ಲಿ ಬರುತ್ತಿದ್ದ ಶ್ಲೋಕಗಳು ನೆನಪಿಗೆ ಬರುತ್ತದೆ. ’ನಮೋ ನಮ: ಯೇಸು ಕ್ರಿಸ್ತ’ ಎಂದು ಶ್ಲೋಕ ಮುಗಿಯುತ್ತಿದ್ದಂತೆ ’ಧೀಂ ಧೀಂತಾ ಧಿರನಾ ಧಿರನಾ’ ಎನ್ನುತ್ತಾ ಹೊಸ ರೂಪ ಪಡೆಯುವ ಗೀತೆ ಕನ್ನಡ ಕ್ರೈಸ್ತ ಸಂಗೀತ ಲೋಕದಲ್ಲಿಹೊಸ ರೀತಿಯ ಟ್ರೆಂಡ್ ಪ್ರಾರಂಭಿಸಿತು ಎಂದರೆ ತಪ್ಪಾಗಲಾರದೇನೋ. 

ಇದಕ್ಕೆ ಮುಂಚೆ ಈ ರೀತಿಯ ಹಾಡು, ಶ್ಲೋಕ, ಆಲಾಪನೆ ಬಂದಿರಲಿಲ್ಲವೆಂದಲ್ಲ, ಆದರೆ ಯುವ ಜನತೆಯ ಮೇಲೆ ಫಾ.ಚಸರಾರವರ  ಸಾಹಿತ್ಯ ಸಂಗೀತ ಬೀರಿದ್ದ ಪರಿಣಾಮವನ್ನುಈ ಗೀತೆ ಮತ್ತಷ್ಟು ಹೆಚ್ಚಿಸಿತು ಹಾಗೂ ನಂತರದ ಗೀತೆಗಳ ರಚನೆಯಲ್ಲಿ ಶಾಸ್ತ್ರೀಯ ಸಂಗೀತದ ಬಳಕೆ ಮತ್ತಷ್ಟು ಹೆಚ್ಚಾಯಿತು ಎಂದೇ ಹೇಳಬಹುದು. 

ಹಾಡಿನ ಸಾಹಿತ್ಯ ಬಹಳ ಸರಳವಾಗಿದೆ ಎಂದೇ ಹೇಳಬಹುದು. ಆದರೆ ಅಲ್ಲಿ ಮತ್ತೆ ಫಾ.ಚಸರರವರ ಮಾಂತ್ರಿಕ ಸ್ಪರ್ಶ ಪ್ರತಿ ಸಾಲಿನಲ್ಲಿದೆ. ವಿಶಾದದ ನಡುವೆ ಕ್ರಿಸ್ತ ತರುವ ಆನಂದ ಹಾಗೂ ಭರವಸೆಯ ಭಾವಗಳೇ ಸ್ಥಾಯಿ ಭಾವವಾಗಿ ಕೊನೆಗೆ ಉಳಿಯುತ್ತದೆ. ’ಬೆಳಕು ಹರಿಯಿತು ಭುವಿಯ ಕಡೆಗೆ ಮನವು ಅರಳಿತು ಕ್ರಿಸ್ತನೆಡೆಗೆ’ ಎಂಬ ಸಾಲುಗಳಲ್ಲಿ ಕ್ರಿಸ್ತನ ಜನನದ ಮೂಲಕ ಭುವಿಯ ಕಡೆಗೆ ಬೆಳಕು ಹರಿದಿದೆ ಎಂಬ ಭಾವವಿದೆ. 

ಅಲ್ಲಿಗೆ ಕ್ರಿಸ್ತ ಶಾಂತಿ, ಪ್ರೀತಿ, ಪ್ರೇಮದ ಸೂರ್ಯನಂತೆ ಎಂಬ ಅರ್ಥವೂ ಇದೆ. ಸೂರ್ಯನ ಬೆಳಕಿನಿಂದ ಹೂವುಗಳು ಹೊಸ ಚೈತನ್ಯ ಪಡೆದು ಬೆಳಕಿನತ್ತ ಮುಖ ಮಾಡಿ ಅರಳುವಂತೆ, ನಮ್ಮ ಮನಗಳು ಕ್ರಿಸ್ತನತ್ತ ಅರಳುತ್ತವೆ ಎಂಬ ಕಲ್ಪನೆಯೇ ಎಷ್ಟು ಸುಂದರ.

ಹಾಗೆಯೇ, ಭುವಿಗೆ ಬಂದ ಯೇಸುಕ್ರಿಸ್ತ, ಸುಮ್ಮನೆ ಬರದೆ ನೊಂದ ಜನತೆಗೆ ಶಾಂತಿಯನ್ನು ತಂದ ಎಂಬ ಸಾಲುಗಳಲ್ಲಿ ಕ್ರಿಸ್ತಜಯಂತಿಯ ಭರವಸೆಯ ಸಂದೇಶವಿದೆ. ಅಲ್ಲಿಗೆ ಮನಗಳು ಸಂತಸದಿಂದ ನಲಿಯುತ್ತವೆ ಎಂಬುದರ ಸಂಕೇತವೆಂಬಂತೆ ’ಸಸಸ ಗಗಪಪ ನಿನಿಪ ನಿಪನಿ’ ಎಂಬ ಸ್ವರಗಳು ಸಂತಸದ ಭಾವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.

ಬೈಬಲ್ ತಜ್ಞರಾದ ವಿಲ್ಲಿಯಂ ಬಾರ್ಕ್ಲೇ ಪ್ರಕಾರ ಯೇಸು ಕ್ರಿಸ್ತ ತಂದ ಬೆಳಕು ಮೂರು ರೀತಿಯದು. ಒಂದು ಎಲ್ಲಾ ರೀತಿಯ ಗೊಂದಲವನ್ನು ಹೋಗಲಾಡಿಸುವ ಬೆಳಕು, ವಿಶ್ವದ ಅತಿ ಹಳೆಯ ಭಯಗಳಲ್ಲಿ ಒಂದಾದ ಕತ್ತಲೆಯ ಭಯವನ್ನು ಹೋಗಲಾಡಿಸುವ ಬೆಳಕು ಇದೇ.  ಇದು ಕೇವಲ ನೈಸರ್ಗಿಕ ಕತ್ತಲು ಮಾತ್ರವಲ್ಲ. 

ಎರೆಡು, ಪ್ರಕಟಗೊಳ್ಳುವ ಬೆಳಕು. ಯೇಸುವಿನ ಬೆಳಕಿನಲ್ಲೇ ನಮ್ಮನ್ನೇ ನಾವು ಕಂಡುಕೊಳ್ಳುವ ಬೆಳಕು. ಮೂರು, ನಮ್ಮನ್ನು ಮುನ್ನಡೆಸುವ ಬೆಳಕು. ನಮ್ಮನ್ನು ಎಲ್ಲಾ ರೀತಿಯಲ್ಲೂ ಮುನ್ನಡೆಸುತ್ತಾ ಎಲ್ಲವನ್ನು ಸ್ಪಷ್ಟಗೊಳಿಸುವ ಬೆಳಕು. ಈ ಗೀತೆಯ ಚರಣಗಳನ್ನು ಗಮನಿಸಿದಾಗ ವಿಲ್ಲಿಯಂರವರು ಹೇಳಿರುವ ಬೆಳಕಿನ ಅಯಾಮಗಳು ಇಲ್ಲೂ ಕಾಣುತ್ತದೆ. ಇದು ಕಾಕತಾಳೀಯವೋ ಇಲ್ಲವೇ ಫಾ.ಚಸರಾರವರ ಅಧ್ಯಯನದ ಪ್ರತಿರೂಪವೋ ಹೇಳಲಾಗುವುದಿಲ್ಲ. 

ಚರಣಗಳು, ಮೊದಲೇ ಹೇಳಿದಂತೆ ಸರಳ ಆದರೆ ಪದಗಳ ಜಾಣ ಜೋಡಿಕೆಯಿಂದ ಆಳ ಅರ್ಥವಂತಿಕೆ ಪಡೆದುಕೊಳ್ಳುತ್ತಾ ಸಾಗುತ್ತದೆ. ಇರುಳಾದ ಮೇಲೆ ಬೆಳಕು ಇದ್ದೇ ಇರುತ್ತದೆ ಎಂಬುದು ಗೊತ್ತಿದ್ದರೂ ಕೆಲವೊಂದು ಇರುಳುಗಳು ನಿರಂತರವೇನೋ ಎಂಬಷ್ಟು ದೊಡ್ದದಾಗಿ ಭಾಸವಾಗುತ್ತದೆ. ನಿದ್ರೆ ಬರದ ರಾತ್ರಿಗಳೂ ಹಾಗೆಯೇ. ಅಂತಹ ಸಮಯದಲ್ಲಿ ಮಿಂಚಿನಂತೆ ಮಿನುಗುವ ಬೆಳಕನ್ನು ಮನಸ್ಸು ಬೇಡಿಕೊಳ್ಳುತ್ತದೆ. 

ಅದೇ ರೀತಿ ’ಮಿಂಚು’ ಎನ್ನುವುದು ಕ್ಷಣ ಮಾತ್ರದ ಬೆಳಕಿನ ಭಾಗವಷ್ಟೆ. ಆದರೆ ಕ್ರಿಸ್ತನ ಬೆಳಕು ಕೇವಲ ಮಿಂಚಿ ಮರೆಯಾಗುವಂಥದಲ್ಲ, ಅದೊಂದು ಜ್ಯೋತಿ, ಹೃದಯದಲ್ಲಿ ಸ್ಥಾಪಿತವಾದದ್ದು ಎಂಬುದನ್ನು ೮ ಪದಗಳ ಎರಡನೆಯ ಸಾಲು ಹೇಳುತ್ತದೆ. ಸಾಹಿತ್ಯದಲ್ಲಿನ ಸರಳತೆಯ ಆಳದ ಉತ್ತಮ  ಉದಾಹರಣೆ ಇದು. ವಿಲ್ಲಿಯಂ ಬಾರ್ಕ್ಲೇಯ ಚಿಂತನೆಗಳು ಮತ್ತೆ ಎರಡನೆಯ ಚರಣದಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ಕೊನೆಯಲ್ಲಿನ  ’ನಗುವ ಚಿಮ್ಮಿಸಿ ನಗುತ್ತಾ ಬಂದ’ ಎಂಬ ಸಾಲು ಕ್ರಿಸ್ತನ ಭರವಸೆಯ ಪ್ರತೀಕ.

ಎಂದಿನಂತೆ ಸಾಧುರವರ ಸಂಗೀತ ತಲೆದೂಗುವಂತೆ ಮಾತ್ರವಲ್ಲದೆ ಕುಣಿಸುವಂತೆಯೂ ಮಾಡುತ್ತದೆ. ಅನೇಕ ಕಾರ್ಯಕ್ರಮಗಳಲ್ಲಿ ಈ ಗೀತೆ ಪ್ರಾರಂಭದ  ಗೀತೆಯಾಗಿ, ನೃತ್ಯವಾಗಿ ಬಳಕೆಯಾಗಿದೆ ಎಂಬುದು ಈ ಗೀತೆಯ ಲವಲವಿಕೆಗೆ ಸಾಕ್ಷಿಯಾಗಿದೆ.

ಐದಾರು ವರ್ಷಗಳ ಹಿಂದೆ ನಾವು ಮಾಡಿದ್ದ ಹೊಸ ಸಿ.ಡಿಯೊಂದನ್ನು ಪ್ಯಾಟ್ರಿಕ್ಸ್ ಚರ್ಚನ ಆವರಣದಲ್ಲಿರುವ ಪೌಲ್ಸ್ ಸೆಂಟರ್ ಗೆ ಕೊಡಲು ಹೋಗಿದ್ದೆ. ಅಲ್ಲಿನ ಮಳಿಗೆಯ ಸಿಬ್ಬಂದಿಯೊಬ್ಬರು  ನಮ್ಮ ಸಿ.ಡಿಗಳನ್ನು ತೆಗೆದುಕೊಂಡು ಹೊಸಬರಾದ ನಮಗೆ ಸಲಹೆ ಇತ್ತರು. " ನೀವು ಯಾವುದೇ ಹೊಸ ಸಿ.ಡಿ ಮಾಡುವಾಗ ಚಸರಾರವರು ಮಾಡುವಂತೆ ಒಂದೋ ಎರೆಡೋ ಕ್ಲಾಸಿಕಲ್ ಹಾಡುಗಳನ್ನು ಮಾಡಿ. ಆಗ ಸ್ಕೂಲು ಹಾಗೂ ಇತರ ಸಂಸ್ಥೆಗಳಿಗೆ ತಮ್ಮ ಕಾರ್ಯಕ್ರಮಗಳಿಗೆ ಆ ಕ್ಲಾಸಿಕಲ್ ಹಾಡುಗಳು ಬೇಕಾಗುತ್ತದೆ. ಸಿ.ಡಿ. ತೆಗೆದುಕೊಳ್ಳುತ್ತಾರೆ ಹಾಗೆಯೇ ಇತರ ಹಾಡುಗಳನ್ನೂ ಕೇಳುತ್ತಾರೆ. ಇಂದಿಗೂ ಕನ್ನಡದಲ್ಲಿ ಬೇಡಿಕೆ ಇರುವುದು  ಫಾ.ಚಸರಾ ಹಾಗೂ ಫಾ ಫೆಲಿಕ್ಸ್ ಗೀತೆಗಳಿಗೇ ಎನ್ನುತ್ತಾ, ’ ಬೆಳಕು ಹರಿಯಿತು’ ಹಾಡಿನ ಉದಾಹರಣೆಯನ್ನು ಕೊಟ್ಟರು. ಅಂದಿಗೇ ಸುಮಾರು ೨೦ ವರ್ಷಗಳಷ್ಟು ಹಳೆಯದಾದ ಈ ಹಾಡು ಉದಾಹರಣೆಗೆ ಬಳಕೆಯಾಗಿದ್ದು ಕೇಳಿ ಆಶ್ಚರ್ಯವಾಯಿತು.


ಹಾಡು ರಚನೆಯ ಸಂದರ್ಭದಲ್ಲಿ ಹಾಡು ಪ್ರಸಿದ್ಧವಾಗಲಿ, ನೃತ್ಯಕ್ಕೆ ಬಳಕೆಯಾಗಲಿ, ಮಾರಾಟವಾಗಲಿ ಎಂಬ ಉದ್ದೇಶಕ್ಕಿಂತ ಮನದಾಳದ ಭಾವದ ಅಭಿವ್ಯಕ್ತಿಯಾಗಿ ಸಾಹಿತ್ಯ ಸಂಗೀತಗಳು ಕೂಡಿಕೊಂಡು ಒಂದು ಮಾಧ್ಯಮವಾಗುತ್ತದೆಯಷ್ಟೇ. ಅದರ ಜನಪ್ರಿಯತೆ, ತಲುಪುವಿಕೆ ಎಲ್ಲವೂ ಅದರ ಮುಂದಿನ ಭಾಗವಷ್ಟೆ. ’ಬೆಳಕು ಹರಿಯಿತು’ ಮನದ ಭಾವಕ್ಕೆ ಒದಗಿದ ಉತ್ಕೃಷ್ಟ ಸಾಹಿತ್ಯ ಸಂಗೀತದ ಪ್ರತಿರೂಪವಾಗಿದೆ.