ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಕ್ರಿಸ್ಮಸ್ ಸಮಾರಂಭ, ಕಾರ್ಯಕ್ರಮವಿರಲಿ ಅದು ದೊಡ್ಡ ಮಟ್ಟದೋ ಚಿಕ್ಕದೋ, ಏನೇ ಆಗಿರಲಿ ಎರಡು ಹಾಡುಗಳಲ್ಲಿ ಒಂದಂತೂ ಇರಲೇಬೇಕು, ಒಮ್ಮೊಮೆ ಎರಡೂ ಇರಬೇಕು. ಒಂದು ಸಿ.ಡೇವಿಡ್ ರವರ ’ಬಾನಿನಿಂದ ದೂತವೃಂದ ಹಾಡ ಹಾಡ್ಯಾರ’, ಇನ್ನೊಂದು ಚಸರಾ ರವರ ’ಹುಟ್ಟ್ಯಾನ ಕ್ರಿಸ್ತ ಗೋದಲಿಯಾಗ’ . ಈ ಹಾಡುಗಳು ಇಲ್ಲದೇ ಆ ಕಾರ್ಯಕ್ರಮ ಅಪೂರ್ಣವೆನೋ ಅನ್ನುವಷ್ಟು ಜನಪ್ರಿಯ ಈ ಹಾಡುಗಳು. ಪೂಜೆಗಳಲ್ಲೂ ಈ ಹಾಡುಗಳು ಅಷ್ಟೇ ಬಳಕೆಯಲ್ಲಿದೆ.
ನೃತ್ಯಗಳಿಗೆ, ರೂಪಕಗಳಿಗೆ ಇದನ್ನು ಚೆನ್ನಾಗಿಯೇ ಬಳಸಿಕೊಂಡಿದೆ ನಮ್ಮ ಕನ್ನಡ ಜನತೆ. ವೃಂದಗಾನದಲ್ಲಿ ಹಾಡಲು ಸ್ವಲ್ಪ ಕಷ್ಟವೇ ಎನ್ನಿಸುವ ಈ ಹಾಡುಗಳನ್ನು, ನಮ್ಮ ಕನ್ನಡ ಗಾನವೃಂದಗಳು ಸೊಗಸಾಗಿ ಹಾಡುವುದು ಕಳೆದ ಇಪ್ಪತ್ತು ವರ್ಷಗಳಲ್ಲಿ ನಮ್ಮ ಗಾನವೃಂದಗಳ ಗುಣಮಟ್ಟದಲ್ಲಿ ಆಗಿರುವ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ವಿ.ನಾಗನಳ್ಳಿಯ ಗಾನವೃಂದದ ಹಾಡುಗಾರರ ಗಾಯನ ಕೇಳಿ ಮರುಳಾಗಿ ಹೋದೆ. ಯಾವುದೇ ನಗರದ ಗಾನವೃಂದಕ್ಕಿಂತ ಉತ್ತಮವಾಗಿ ಹಾಡುತ್ತಿದ್ದರು ಅಲ್ಲಿನ ಯುವಕರು.
ಚಸರಾರವರ ಗೀತೆಗಳಲ್ಲಿ ’ಹುಟ್ಟ್ಯಾನ ಕ್ರಿಸ್ತ’ ನಿಜಕ್ಕೂ ಅತ್ಯಂತ ಜನಪ್ರಿಯ ಗೀತೆಗಳಲ್ಲಿ ಒಂದು. ’ಸಿಟ್ಟಾಗ ಬ್ಯಾಡ ಸ್ವಾಮಿ’ ಧ್ವನಿಸುರಳಿಯಲ್ಲಿನ ಈ ಹಾಡು ಕೇಳುಗರಿಗೆ ಒಂದು ಹೊಸ ಅನುಭವ ನೀಡುವುದರಲ್ಲಿ ಸಂದೇಹವಿಲ್ಲ. ’ಸ್ಫೂರ್ತಿ’ ’ಸ್ಪರ್ಶಿತ’ ಸ್ಮೃತಿ’ ಹೀಗೆ ಸುಂದರ ಕಾವ್ಯಾತ್ಮಕ ಹೆಸರುಗಳ ನಡುವೆ ’ಸಿಟ್ಟಾಗ ಬ್ಯಾಡ ಸ್ವಾಮಿ’ ಎಂಬುದು ಚಸರಾರವರ ಹೊಸ ಧ್ವನಿಸುರಳಿಯ ಹೆಸರು ಎಂದು ಕೇಳಿದಾಕ್ಷಣ ಆಭಾಸವೆನಿಸಿದ್ದು ನಿಜ. ಧ್ವನಿಸುರಳಿಯ ಮುಖಪುಟ(ಇನ್ ಲೇ ಕಾರ್ಡ್) ಕೂಡ ಸ್ವಲ್ಪ ಹಾರ್ಶ್ ಆಗಿಯೇ ಇತ್ತು. ಧ್ವನಿಸುರಳಿಗೆ ಏಕೆ ಈ ಹೆಸರು? ಆಶಯ? ಎಲ್ಲದರ ಬಗೆಗಿನ ಪ್ರಶ್ನೆಗೆ ಉತ್ತರ ಕೊಡುತ್ತದೆ ’ಹುಟ್ಟ್ಯಾನ ಕ್ರಿಸ್ತ’ ಹಾಡು.
ಮೊದಲ ಸಾಲಲ್ಲೇ ’ಗೋದಲಿಯಲ್ಲಿ ಹುಟ್ಟಿದ ಯೇಸುವಿಗೆ ಬಂಗಾರ ಯಾಕೆ ತಂದಿರೋ" ಎಂಬ ಪ್ರಶ್ನೆ ಇದೆ. ಅಂದು ಯೇಸುವಿಗೆ ಬಂಗಾರ ತಂದವರು, ಆ ಮೂವರು ಜ್ಞಾನಿಗಳಲ್ಲಿ ಒಬ್ಬರು. ಆ ಕಾಲದಲ್ಲೇ ಒಬ್ಬ ರಾಜನನ್ನು ಸಂಧಿಸಲು ಹೋದಾಗ ಬಂಗಾರದ ಕಾಣಿಕೆ ಕೊಡುವುದು ವಾಡಿಕೆ ಇತ್ತು. ಜ್ಞಾನಿಗಳಾಗಿದ್ದ , ಪಂಡಿತರಾಗಿದ್ದ ಆ ಜ್ಞಾನಿಗಳಿಗೆ ಯೇಸು ರಾಜನೆಂಬ ಬಲವಾದ ನಂಬಿಕೆ ಇತ್ತು. ಆದರೆ ಯೇಸು ಮುಂದೆ ಕಟ್ಟಿದ್ದು ಹೃದಯಗಳ ಸಾಮ್ರಾಜ್ಯ, ಪ್ರೀತಿ ಕ್ಷಮೆಗಳ ಕೋಟೆ. ಇಂತಹ ರಾಜನಿಗೆ ’ಚಿನ್ನ’ಕ್ಕಿಂತ ಪರಿಶುದ್ದವಾದ ಹೃದಯದ ಕಾಣಿಕೆ ತನ್ನಿರೋ ಎಂಬಲ್ಲಿಗೆ ಎರಡನೆಯ ಸಾಲು ಮೊದಲನೆಯ ಸಾಲಿಗೆ ಉತ್ತರವನ್ನು ಪರಿಹಾರವನ್ನೂ ತರುತ್ತದೆ. ಒಂದು ಸಾಮಾನ್ಯ ಲೋಹ ’ಬಂಗಾರ’ವಾಗುವ ಪ್ರಕ್ರಿಯೆಯಲ್ಲಿ ಅದು ’ಬೆಂಕಿ’ಯಲ್ಲಿ ಶುದ್ಧವಾಗುವಂತೆ ’ಕ್ರಿಸ್ತ’ ಜನನ ನಮ್ಮ ಹೃದಯಗಳ ಪರಿವರ್ತನೆಗೆ ಕಾರಣವಾಗಬೇಕು ಹಾಗೂ ಆ ಪರಿವರ್ತಿತ ಹೃದಯವೇ ದೊಡ್ಡ ಕಾಣಿಕೆ ಎಂಬುದು ಈ ಸಾಲುಗಳ ಅರ್ಥವೇ ಇರಬೇಕು.
ಮುಂದಿನ ಎರಡು ಚರಣಗಳ ಬಗ್ಗೆ ಬರೆಯಬೇಕಾದೇನಿಲ್ಲ. ಅದು ಐತಿಹಾಸಿಕ. ಪ್ರತಿಯೊಂದು ಸಾಲೂ ನಮ್ಮ ಇತರ ಕ್ರಿಸ್ಮಸ್ ಹಾಡುಗಳಿಗಿಂತ ತೀರ ಭಿನ್ನ ತನ್ನ ಆಶಯದಲ್ಲಿ. ಚಸರಾರವರ ಎಂದಿನ ಆತ್ಮವಿಮರ್ಶೆ, ಧರ್ಮದ ಬಗೆಗಿನ ಕಾಳಜಿ, ಅಸಹಾಯಕತೆ, ಭರವಸೆ ಎಲ್ಲವೂ ಅಲ್ಲಿದೆ.
ಮೊದಲ ಚರಣದಲ್ಲಿ ನಮ್ಮ ಹುಸಿಬದುಕ ಬಗ್ಗೆ ಪಶ್ಚಾತ್ತಾಪವಿದ್ದೂ, ಮತೊಮ್ಮೆ ಯೇಸು ಮರಳಿ ಬರುವಷ್ಟರಲ್ಲಿ ಸರಿಹೋಗುತ್ತದೆ ಎಂಬ ವಾಗ್ದಾನವಿದ್ದರೆ, ಎರಡನೆಯ ಚರಣದಲ್ಲಿ ’ನೀನೇ ನ್ಯಾಯ ಸತ್ಯವನ್ನು ಜಗಕ್ಕೆ, ಜನತೆಗೆ ತರಬೇಕು’ ಎಂಬ ಭಾರವನ್ನು ಯೇಸುವಿನ ಮೇಲೆ ಹೊರಿಸುವ ಸಮರ್ಪಣಾ ಭಾವವಿದೆ.
ಹಾಡು ಇಷ್ಟವಾಗುವಲ್ಲಿ ಸಾಹಿತ್ಯ, ಸಾಹಿತ್ಯದಲ್ಲಿ ಬಳಕೆಯಾಗಿರುವ ಜಾನಪದ ಭಾಷೆ, ಭಾಷೆಯ ಸರಳತೆ, ಸರಳತೆಯ ಹಿಂದಿನ ಗಾಢತೆ, ತೂಕ ಸಹಕಾರಿಯಾಗಿದೆ. ಅಷ್ಟೇ ಸುಂದರವಾಗಿರುವುದು ಸ್ಟೀಫನ್ ದತ್ತ್ ರವರ ಸಂಗೀತ. ಮೊದಲೇ ಹೇಳಿದಂತೆ ಕ್ರಿಸ್ಮಸ್ ಕಾರ್ಯಕ್ರಮಗಳಲ್ಲಿ ಈ ಹಾಡಿಗೆ ನೃತ್ಯ ಇರಲೇಬೇಕೆನಿಸುವಷ್ಟು ಸುಂದರವಾಗಿದೆ ಇದರ ಸಂಗೀತ ಸಂಯೋಜನೆ. ರಾಜೇಶ್ ಹಾಗೂ ರಮ್ಯರ ಗಾಯನದ ಬಗ್ಗೆ ನಮ್ಮಂಥವರು ಹೇಳಬೇಕಾದೇನಿಲ್ಲ. ಹಾಡಿನ ಪ್ರಾರಂಭದಲ್ಲಿ ಬರುವ ಪ್ರೀಲೂಡ್ ಹಾಗೂ ನಂತರದ "ಏಲೋಹಿಮ್" ಎಂಬ ಲ್ಯಾಟಿನ್ ಸಾಲು ಹಾಡನ್ನು ಆರಂಭದಲ್ಲೇ ಎತ್ತರದಲ್ಲಿ ನಿಲ್ಲಿಸುತ್ತದೆ. ಹಾಡು ಅಲ್ಲಿಂದ ಯಾವುದೇ ರೀತಿಯಲ್ಲಿ ಕೆಳಗಿಳಿಯುವುದೇ ಇಲ್ಲ ತನ್ನ ಗುಣಮಟ್ಟದಲ್ಲಿ.
ಹಾಡಿನ ಮತ್ತೊಂದು ಸುಂದರ ಅಂಶವೆಂದರೆ ಚರಣದ ನಡುವೆ ಬರುವ ’ಆಲಾಪನೆ’. ಕೆಲವೊಂದು ಆಲಾಪನೆಗಳು ಹಾಡಿನೊಳಗೆ ಅದೆಷ್ಟು ಸೇರಿಕೊಂಡಿರುತ್ತದೆ ಎಂದರೆ ಹಾಡನ್ನು, ಆಲಾಪನೆಗಳನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಾಗುವುದೇ ಇಲ್ಲ. ಗೀತ ಚಿತ್ರದ ’ಜೊತೆಯಲ್ಲಿ ಜೊತೆಯಲ್ಲಿ’ ಹಾಡಿನ ಚರಣದಲ್ಲಿ ಬರುವ, ’ನಾವಾಡುವ ನುಡಿಯೇ’ ಹಾಡಿನ ಪ್ರಾರಂಭದಲ್ಲಿ ಬರುವ, ’ಕಾದಲ್ ರೋಜವೇ’ ಹಾಡಿನಲ್ಲಿ ಬರುವ ಅಲಾಪನೆಗಳು ಇದಕ್ಕೆ ಒಂದೆರೆಡು ಉದಾಹರಣೆಗಳು. ಹಾಗೆಯೇ ’ಹುಟ್ಟ್ಯಾನ ಕ್ರಿಸ್ತ’ ಗೀತೆಯ ಆಲಾಪನೆ ಕೂಡ. ಇಡೀ ಹಾಡಿನ ಆಶಯಕ್ಕೆ, ಜೀವಕ್ಕೆ ಕಳಶವಿಟ್ಟಂತೆ ಬಂದುಹೋಗುವ ಆ ’ಆಲಾಪನೆ’ ಹಾಡಿನ ಮೆರಗನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೊಳಲು ವಾದಕ ಬುಟ್ಟೋ ಅವರು ಈ ಆಲಾಪನೆಯನ್ನು ಹಾಡಿದ್ದಾರೆ ಎಂಬ ಆಸಕ್ತಿದಾಯಕ ಮಾಹಿತಿಯನ್ನು ಸ್ವತ: ಸ್ಟೀಫನ್ ದತ್ತ್ ರವರೇ ನೀಡಿದ್ದಾರೆ.
ತಮ್ಮದೇ ಹಾಡುಗಳಲ್ಲಿ ಮೊದಲು ಸಾಹಿತ್ಯ ರಚಿಸುತ್ತಿದ್ದರೇ, ಇಲ್ಲವೇ ಸಂಗೀತ ಮೊದಲೋ ಎಂಬ ಕುತೂಹಲ ಚಸರಾರವರ ಹಾಡುಗಳ ಬಗ್ಗೆ ನನಗಿತ್ತು. ಇದೇ ಕುತೂಹಲ ನನ್ನ ನೆಚ್ಚಿನ ಸಂಗೀತ ನಿರ್ದೇಶಕ ಹಂಸಲೇಖರಾ ಹಾಡುಗಳ ಬಗ್ಗೆಯೂ ಇತ್ತು. ಸಂಗೀತ ಕಾರ್ಯಕ್ರಮವೊಂದರಲ್ಲಿ ಇದೇ ಪ್ರಶ್ನೆಯನ್ನು ಹಂಸಲೇಖಾರಿಗೆ ಕೇಳಿದಾಗ, ಬಹುತೇಕ ಗೀತೆಗಳಲ್ಲಿ ಸಾಹಿತ್ಯ ಸಂಗೀತ ಎರಡೂ ಒಟ್ಟೊಟ್ಟಿಗೆ ಬರುತ್ತದೆ ಎಂಬ ಉತ್ತರ ಅವರಿಂದ ಬಂತು. ’ಹುಟ್ಟ್ಯಾನ ಕ್ರಿಸ್ತ’ ಹಾಡನ್ನು ಅದರ ರೂಪುರೇಷೆ ಸಿದ್ಧಪಡಿಸಿಕೊಂಡು ಸಾಹಿತ್ಯ ಸಂಗೀತದೊಂದಿಗೆ ಒಟ್ಟಿಗೇ ರಚಿಸಿದರು ಎಂಬ ರೀನಿಯವರ ಮಾಹಿತಿ ನನಗೆ ಆಶ್ಚರ್ಯ ತರಿಸಲಿಲ್ಲ. ಎರಡೂ ಒಟ್ಟಿಗೇ ಬಂದಾಗ ಮೂಡಬಹುದಾದ ಸುಂದರ ಕೃತಿಯಂಥಾ ಹಾಡಿಗೆ ಸಾಕ್ಷಿಯಾಗಿದೆ ಈ ಹಾಡು.
ಇದು ’ಹುಟ್ಟ್ಯಾನ ಕ್ರಿಸ್ತ’ನ ಕಥೆಯಾದರೆ, ಇನ್ನೂ ’ಸಂವೇದ್ಯ’ ಧ್ವನಿಸುರಳಿಯ ’ಬಾನಲಿ ದೂತರು ಹಾಡಿದರು’ ಹಾಡಿನ ಬಗ್ಗೆ ಹೇಳದೆ ಈ ಲೇಖನ ಮುಗಿಸಲು ಸಾಧ್ಯವಿಲ್ಲವೇನೋ. ಕ್ರಿಸ್ತ ಜಯಂತಿಯ ಇಡೀ ಸಾರವನ್ನು ಒಡಲಲ್ಲಿಟ್ಟುಕೊಂಡಂತಿರುವ ಈ ಗೀತೆಯಲ್ಲಿ ಐದು ಚರಣಗಳಿವೆ. ಐದೂ ಚರಣಗಳು ಬೇರೆ ಬೇರೆ ರಾಗ, ಟ್ಯೂನಿನಲ್ಲಿರುವುದು ಗೀತೆಯ ವಿಶೇಷ. ಸಿ. ಅಶ್ವತ್ಥ್‍ರವರ ಗೀತೆಗಳಲ್ಲಿ ಈ ಪ್ರಯೋಗವನ್ನು ನಾವು ಕಾಣಬಹುದು.ಈ ವಿಶೇಷತೆಯ ಹೊರತಾಗಿಯೂ ಸುಂದರ ಸಾಹಿತ್ಯ ಹಾಗೂ ಸಂಗೀತದೊಂದಿಗೆ ಮನಸೆಳೆಯುವ ಗೀತೆ ’ಬಾನಲಿ ದೂತರು ಹಾಡಿದರು’.
ಮೊದಲು ತಿಳಿಸಿದ ಸಿ.ಡೇವಿಡ್‍ರವರ ರಚನೆಯ ’ಬಾನಿನಿಂದ ದೂತ ವೃಂದ ಹಾಡ ಹಾಡ್ಯಾರ’ ಗೀತೆಯ ಸಾಹಿತ್ಯವೂ ಫಾ.ಚಸರಾರವರದೇ. ಹಾಗೆ ನೋಡಿದರೆ ಫಾ.ಚಸರಾ ಹಾಗೂ ಸಿ.ಡೇವಿಡ್ ಜುಗಲ್‍ಬಂದಿಯ ಅನೇಕ ಕ್ರಿಸ್‍ಮಸ್ ಗೀತೆಗಳು ಮನಮೋಹಕವಾಗಿವೆ. ಡೇವಿಡ್‍ರವರ ಆಕರ್ಷಕ ಸಂಗೀತ ಶೈಲಿಗೆ ಅಷ್ಟೇ ಆಕರ್ಷಕವಾದ ಚಸರಾರವರ ಸಾಹಿತ್ಯ ಒದಗಿ ಬಂದು, ಹಾಡುಗಳು ಕನ್ನಡ ಕ್ರೈಸ್ತರ ಮನದಲ್ಲಿ ಉಳಿದುಕೊಂಡಿದೆ. ಅದೆಷ್ಟೋ ಹಾಡುಗಳಿಗೆ ಪೂರ್ತಿ ಚರಣಗಳನ್ನು ಬರೆದರೂ, ಪ್ರಾರಂಭದ ಪಲ್ಲವಿ ಬರೆದವರಿಗೇ ಹಾಡಿನ ಪೂರ್ತಿ ಕ್ರೆಡಿಟ್ ಕೊಡುತ್ತಿದ್ದರು ಎಂಬ ಮಾಹಿತಿ ಫಾ.ಚಸರಾರವರ ದೊಡ್ಡತನಕ್ಕೆ ಸಾಕ್ಷಿಯಾಗಿದೆ.
"ಮಗು ಜನಿಸುವಾಗ, ಹಾಡು ಹುಟ್ಟುವಾಗ ಕೈಯಲ್ಲಿ ದೀಪ ಇಟ್ಟುಕೊಂಡು ಕಾಯುವುದಷ್ಟೇ ನಮ್ಮ ಕೆಲಸ" ಎಂದು ಹಂಸಲೇಖರವರು ಕಾರ್ಯಕ್ರಮವೊಂದರಲ್ಲಿ ಹೇಳುತ್ತಾರೆ. ಸಾಮಾನ್ಯರಾದ ನಮಗೆ ಕೆಲವೊಂದು ಹಾಡುಗಳನ್ನು ಕೇಳುವಾಗ ಇದು ಅನ್ವಯಿಸುತ್ತದೇನೋ.......
