ಒಬ್ಬ ಸಮರ್ಥ ಗುರು, ನಿಜ ಕ್ರೈಸ್ತತ್ವದ ಪ್ರತಿಪಾದಕ, ಅದೇ ಕಾರಣಕ್ಕೆ ಖಂಡಿತವಾದಿ, ಹೋರಾಟಗಾರ, ಚೆಂದದ ಸಾಹಿತಿ, ಮನಮುಟ್ಟುವ ಬರಹಗಾರ, ಅನನ್ಯ ಸಂಗೀತಗಾರ, ವಿಚಾರವಾದಿ, ಚಿಂತಕ, ಚಿಂತನೆಗಳನ್ನು ಸರಳ ಸುಂದರವಾಗಿ ತಲುಪಿಸಬಲ್ಲ ವಾಗ್ಮಿ, ಸ್ನೇಹ ಜೀವಿ, ಪ್ರೇರಕ ಶಕ್ತಿ, ವಿವಾದಾತ್ಮಕ ವ್ಯಕ್ತಿತ್ವ...
Saturday, October 29, 2016
ಚಸರಾ ಪುಸ್ತಕಗಳ ಪಟ್ಟಿ
- ಖಲೀಲ್ ಗಿಬ್ರಾನ್ ನ ಜೀಸಸ್
- ಆಂತರ್ಯ ೧
- ಆಂತರ್ಯ ೨
- ಆಂತರ್ಯ ೩
- ಜೊತೆ ಜೊತೆಯಲ್ಲಿ
- ಕನಸಿರಲಿ ಕೊನೆವರೆಗೆ
- ಶತ್ರುಮಿತ್ರರ ನಡುವೆ ಹಾಯಿ ದೋಣಿ
- ನಮ್ಮ ಎದೆಯೊಳಗಿನ ಹಣತೆ
- ಸೃತಿ ಶಿಲ್ಪಿ ಫಾ.ಅಂತಪ್ಪ
- ಮತಾಂತರ
- ಚೇತನ - ೬ ಆವೃತ್ತಿಗಳು
- ಸಂಸ್ಕಾರ ವಿಧಿಗಳು ಮತ್ತು ಆಶೀರ್ವಚನ
- ಸಾಮತಿ ಎಂಬ ಕಥಾಲೋಕ
- ಕ್ರಿಸ್ತನ ಕೊನೆ ದಿನ
- ಕ್ರಿಸ್ತನೊಳಗಿನ ಕ್ರಿಸ್ತ
- ಅದುಮಿಟ್ಟ ನೆನಪಿನ ಪುಟಗಳಿಂದ
- ಇಕ್ಕಟ್ಟಿಗೆ ಸಿಲುಕಿಸಿಬಿಟ್ಟೆ ಕ್ರಿಸ್ತ




Tuesday, October 11, 2016
ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 3 - ’ನನ್ನ ತಂದೆಯ ಈ ಆಲಯ’
ಕಳೆದ ಸಂಚಿಕೆಯಲ್ಲಿ ’ಸ್ಫೂರ್ತಿಯಾಗಲಿ ಕ್ರಿಸ್ತ’ ಬಗೆಗಿನ ಬರಹವನ್ನು ಓದಿದ ಒಂದಿಬ್ಬರು ಯುವಮಿತ್ರರು ಬರಹ ಇನ್ನಷ್ಟು ಸರಳವಾಗಿದ್ದರೆ ಓದಲು, ಅರ್ಥ ಮಾಡಿಕೊಳ್ಳಲು ಸುಲಭವಾಗಿರುತ್ತದೆ, ಓದಿಸಿಕೊಂಡು ಹೋಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮುಗಳ್ನಕ್ಕು ಸುಮ್ಮನಾದೆ. ಆ ಹಾಡಿನ ಪ್ರತಿ ಸಾಲಿನ ಬಗ್ಗೆ ವಿವರವಾಗಿ ಬರೆದ ಕಾರಣಕ್ಕೆ ಹಾಗೆನಿಸಿತೇನೋ. ಆದರೆ ಎಲ್ಲಾ ಹಾಡುಗಳ ಬಗ್ಗೆ ಅಷ್ಟು ದೀರ್ಘವಾಗಿ, ವಿವರವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ’ಸ್ಪೂರ್ತಿಯಾಗಲಿ ಕ್ರಿಸ್ತ’ ನಿಜಕ್ಕೂ ಒಂದು ಅಪರೂಪದ ಗೀತೆ ಹಾಗೂ ವಿವರವಾದ ಬರಹಕ್ಕೆ ಯೋಗ್ಯವಾದಂತ ಗೀತೆ. ನಿಧಾನವಾಗಿ ಓದಿದಾಗ ಮುಂದೆ ಎಂದಾದರೂ ಆ ಲೇಖನ ಆ ಗೆಳೆಯರಿಗೆ ಇಷ್ಟವಾಗಬಹುದೇನೋ.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಈ ಭಾಗದಲ್ಲಿ ನಾನು ಬರೆಯಲು ಆರಿಸಿಕೊಂಡ ಚಸರಾರವರ ಮುಂದಿನ ಗೀತೆ ’ನನ್ನ ತಂದೆಯ ಈ ಆಲಯ’. ಕಾಕತಾಳೀಯವೆಂಬಂತೆ ಚಸರಾರವರ ಗೀತೆಗಳಲ್ಲಿ ಸಾಹಿತ್ಯಿಕವಾಗಿ, ಸಂಗೀತದ ದೃಷ್ಠಿಯಿಂದ ಅತ್ಯಂತ ಸರಳವಾದ ಗೀತೆ ಇದು ಎಂದೇ ಹೇಳಬಹುದು. ಸರಳವಾದರೂ ನನ್ನ ಅತ್ಯಂತ ಇಷ್ಟವಾದ ಗೀತೆಗಳಲ್ಲಿ ಇದೂ ಒಂದು. ಏಕೆ ಇಷ್ಟ ಎಂದು ಹೇಳಲು ಕಷ್ಟವಾದರೂ, ಪ್ರಾಯಶ: ಈ ಗೀತೆಗೆ ಇರುವ ಹಿನ್ನಲೆ, ಗೀತೆಯನ್ನು ಕೇಳಿದ ಮೊದಲ ಸಂದರ್ಭ, ಗೀತೆಗೆ ಅಂಟಿಕೊಂಡಿರುವ ದೃಶ್ಯ ಸ್ವರೂಪವೆಲ್ಲವೂ ಇದಕ್ಕೆ ಕಾರಣವೇನೋ.
’ನನ್ನ ತಂದೆಯ ಈ ಆಲಯ’ ಗೀತೆಯನ್ನು ನಾ ಮೊದಲು ಕೇಳಿದ್ದು 1995ರಲ್ಲಿ, ಮರಿಯಾಪುರದ ಮಹಿಮೆಯ ಮೊದಲ ಪ್ರದರ್ಶನದಲ್ಲಿ. ಆ ಮೊದಲ ಪ್ರದರ್ಶನದಲ್ಲಿನ ಬೆಳಕು, ರಂಗ ಸಜ್ಜಿಕೆ, ಧ್ವನಿ ವ್ಯವಸ್ಥೆ, ಜನ ಸಾಗರ ಎಲ್ಲವನ್ನೂ ನೋಡಿ ಮೂಕವಿಸ್ಮಿತನಾಗಿ ಹೋಗಿದ್ದ ನಾನು, ಕನ್ನಡದಲ್ಲಿಯೂ ಇಂತಹ ಕಾರ್ಯಕ್ರಮ ಸಾಧ್ಯವಾಯಿತಲ್ಲ ಎಂಬ ಆಲೋಚನೆಯಿಂದ ರೋಮಾಂಚಿತನಾಗಿದ್ದೆ. ಕೇವಲ ಬೆಳಕು, ಥಳಕು, ಜಾತ್ರೆ ಮಾತ್ರವಲ್ಲದೆ ಅಂದು ನನ್ನನ್ನು ಸೆಳೆದದ್ದು ಮಹಿಮೆ ನಾಟಕದ ಅದ್ಭುತವೆನಿಸುವಂತ ಸಾಹಿತ್ಯ, ಸಂಗೀತ ಹಾಗೂ ಹಿನ್ನಲೆ ಸಂಗೀತ. ಮಹಿಮೆಯ ಮೂಲ ಆವೃತ್ತಿ ಏನಿತ್ತೋ ಅದು ಇಂದಿಗೂ world class. ಈ ಮಹಿಮೆಯ ಹಾಡುಗಳನ್ನೊಳಗೊಂಡ ಧ್ವನಿಸುರಳಿಯೇ ’ಸಂವೇದ್ಯ’.
ಕಳೆದ ಸಂಚಿಕೆಯಲ್ಲಿ ನಾವು ಚರ್ಚಿಸಿದ ’ಸ್ಪೂರ್ತಿ’ ಧ್ವನಿಸುರಳಿ ಕನ್ನಡ ಕ್ರೈಸ್ತ ಸಂಗೀತದ ಅತ್ಯುತ್ತಮ ಧ್ವನಿಸುರಳಿಗಳಲ್ಲಿ ಒಂದಾದರೆ, ’ಸಂವೇದ್ಯ’ ಒಂದು ಮಹತ್ವದ ಧ್ವನಿಸುರಳಿ ಎಂದರೆ ತಪ್ಪಾಗಲಾರದು. ’ಸ್ಪೂರ್ತಿ’ ಕನ್ನಡ ಭಕ್ತಿಗೀತೆಗಳ ಒಂದು ಸಿದ್ಧ ಸೂತ್ರಕ್ಕಿಂತ ಭಿನ್ನವಾದ ಸೃಜನಾಶೀಲತೆಯನ್ನು ಒಳಗೊಂಡಿದ್ದರೆ, ’ಸಂವೇದ್ಯ’ ದ ಗೀತೆಗಳು ಇಡೀ ಬೈಬಲ್ ನ ಸಾರವನ್ನು ವಿಶಿಷ್ಠ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಿದ ಕೃತಿ. ಬೈಬಲ್ ಆಧಾರಿತ ಮಹಿಮೆ ನಾಟಕದ ಹಾಡುಗಳು ಎಂದಾಕ್ಷಣ ಒಂದು ರೀತಿಯ ಚೌಕಟ್ಟಿನಲ್ಲಿ ಹಾಡುಗಳನ್ನು ರಚಿಸುವ, ಸಾಹಿತ್ಯವನ್ನು ಮಿತಿಗೊಳಿಸುವ ಅನಿವಾರ್ಯತೆ, ಸೀಮಿತ ಅವಕಾಶ ತಾನಾಗಿಯೇ ಏರ್ಪಡುತ್ತದೆ. ಆದರೆ ಬೈಬಲ್ ನ ನಾವು ನೀವು ಕೇಳಿದ, ಓದಿದ ಘಟನೆಗಳಿಗೆ ಹೇಗೆ ಹೊಸ ಸ್ಪರ್ಶವನ್ನು ನೀಡಬಹುದು ಎಂಬುದಕ್ಕೆ ’ಸಂವೇದ್ಯ’ದ ಗೀತೆಗಳು ಸಾಕ್ಷಿಯಾಗಿದೆ.
ಯೇಸು ಜೆರುಸಲೇಮ ನಗರದ ಮಹಾದೇವಾಲಯದಲ್ಲಿನ ವರ್ತಕರನ್ನು ಅಲ್ಲಿಂದ ಓಡಿಸುವ ಸಂದರ್ಭದಲ್ಲಿ ’ನನ್ನ ತಂದೆಯ’ ಹಾಡು ಬರುತ್ತದೆ. ’ಸಂವೇದ್ಯ’ ಆರಂಭಿಕ ನಿರೂಪಣೆಯ ಬಗ್ಗೆ ಮತ್ತೆ ಒಂದೆರೆಡು ಮಾತು. ಫಾ.ಚಸರಾರವರ ಧ್ವನಿಯಲ್ಲಿಯೇ ಇರುವ ಈ ನಿರೂಪಣೆಯ ಆರಂಭದಲ್ಲಿ ಸುಂದರವಾದ ಸಾಲುಗಳು ಈ ರೀತಿಯಲ್ಲಿವೆ -
"ಬಿರುಗಾಳಿಯ ಅಬ್ಬರ ತಂಗಾಳಿಗಿಲ್ಲ, ಆದರೆ ಮಾಧುರ್ಯತೆ ಮಿನುಗುವುದೇ ಈ ಮಂದಹಾಸದ ಮೆಲ್ಲುಡಿಯಲ್ಲಿ
ಎಲ್ಲಿಂದಲೋ ಬಂದು ಅಂತರಾಳದ ಭಾವನೆಗಳನ್ನು ನವಿರಾಗಿ ತಟ್ಟಿ ತಂಪಾಗಿಸುವ ಈ ಸಂವೇದನೆ ಸೃಷ್ಟಿಯ ಶ್ರೇಷ್ಠತೆಯಷ್ಟೇ ಸೌಮ್ಯ"
ಒಂದು ತಂಗಾಳಿ ಎಷ್ಟು ನವಿರಾಗಿ ನಮ್ಮನ್ನು ತಟ್ಟಬಲ್ಲದು ಎಂಬುದರ ವರ್ಣನೆ ಇಲ್ಲಿದೆ. ಇದಕ್ಕೆ ಇನ್ನಷ್ಟು ವಿವರಣೆ ಬೇಡ. ’ನನ್ನ ತಂದೆಯ ಹಾಡು ಕೇಳಿದಾಗಲೆಲ್ಲಾಈ ಮೇಲಿನ ನಿರೂಪಣೆಯ ಸಾಲುಗಳು ನೆನಪಿಗೆ ಬರುತ್ತದೆ. ಅನೇಕ ವೈವಿಧ್ಯಮಯ, ಸಂಗೀತ ಪ್ರಧಾನ, ಸಾಹಿತ್ಯ ಪೂರ್ಣ, ಭಾವಪೂರ್ಣ ಹಾಡುಗಳ ನಡುವೆಯೂ ಅತ್ಯಂತ ಸರಳ ಗೀತೆಗಳಿಗೆ ತಮ್ಮದೇ ಆದ ನವಿರಾದ ಸೌಂದರ್ಯವಿದೆ. ಅಂತಹ ಹಾಡುಗಳಲ್ಲಿ ’ನನ್ನ ತಂದೆಯ’ ಒಂದು. ಒಂದು ಮಂದಹಾಸದ ಮೆಲ್ಲುಡಿಯಂಥ ಸ್ವಭಾವ ಈ ಹಾಡಿಗಿದೆ. ಸರಳ ವಾದ್ಯ ಸಂಯೋಜನೆಯಿಂದಾಗಿ ಇಲ್ಲಿ ಮಾಧುರ್ಯ ಮಿನುಗುತ್ತದೆ. ಇಡೀ ಹಾಡು ತನ್ನ ಸೌಮ್ಯತೆಯಿಂದ ನಮ್ಮ ಅಂತರಾಳದ ಭಾವನೆಗಳನ್ನು ತಟ್ಟುತ್ತದೆ. ಸಂವೇದ್ಯ ಧ್ವನಿಸುರಳಿಯನ್ನು ಗಮನವಿಟ್ಟು ಕೇಳಿದಾಗ , ಅಲ್ಲಿನ ಇನ್ನಿತರ ಹಾಡುಗಳಿಗಿರುವಷ್ಟು prelude, ಅಂದರೆ ಗಾಯನಕ್ಕಿಂತ ಮುಂಚೆ ಬರುವ ವಾದ್ಯ ಹಿನ್ನಲೆ ಸಂಗೀತ ಇಲ್ಲಿ ಬಹಳ ಚಿಕ್ಕದಾಗಿದೆ. ಮೊದಲ ಐದು ಸೆಂಕೆಂಡ್ ಗಳಲ್ಲಿಯೇ ಗಾಯನ ಪ್ರಾರಂಭವಾಗುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೆ ಪ್ರಾರಂಭ ವಾಗುವ ಈ ಹಾಡು ’ ಎಲ್ಲಿಂದಲೋ ಬಂದು ಅಂತರಾಳದ ಭಾವನೆಗಳನ್ನು...’ ಎಂಬ ನಿರೂಪಣೆಯ ಮೇಲಿನ ಸಾಲುಗಳನ್ನು ನೆನಪಿಸುತ್ತದೆ.
ಮತ್ತಾಯನ ಶುಭ ಸಂದೇಶದ 21: 12-14ರಲ್ಲಿ ಬರುವ ಜೆರುಸಲೇಮ ಮಹಾದೇವಾಲಯದಲ್ಲಿನ ಘಟನೆಯ ಹಿನ್ನಲೆ ಈ ಹಾಡಿಗಿದೆ. ವ್ಯಾಪಾರ ಹಾಗೂ ಹಣ ವಿನಿಮಯಯದ ತಾಣವಾಗಿ ಮಾರ್ಪಟ್ಟ ಮಹಾದೇವಾಲಯವನ್ನು ಕಂಡು ಯೇಸು ಅಕ್ರೋಶಗೊಳ್ಳುತ್ತಾರೆ, ಮರಗುತ್ತಾರೆ ಹಾಗೂ ತಾವೇ ಅವರನ್ನು ಓಡಿಸುತ್ತಾರೆ. ಕೊನೆಯಲ್ಲಿ ತಮ್ಮತನಕ್ಕೆ ಮರಳುತ್ತಾರೆ. ಬೈಬಲ್ ಪಂಡಿತರು ಈ ಘಟನೆಯ ಬಗ್ಗೆ ಸುವಿಸ್ತಾರವಾಗಿ ಬರೆದಿದ್ದಾರೆ. ಆಗ ಮಹಾದೇವಾಲಯಕ್ಕೆ ಬರುತ್ತಿದ್ದವರು ಬಲಿ ಅರ್ಪಣೆಯನ್ನು ಅನೇಕ ಕಾರಣಗಳಿಂದ ಮಾಡಬೇಕಾಗುತಿತ್ತು. ಅದಕ್ಕಾಗಿ ಪ್ರಾಣಿ ಪಕ್ಷಿಗಳ ಮಾರಾಟ ಮಹಾದೇವಾಲಯದ ಒಳಗೂ, ಹೊರಗೂ ಬಹಳ ಜೋರಾಗಿಯೇ ನಡೆಯುತ್ತಿತ್ತು. ಈ ಮಾರಾಟ ಮಹಾದೇವಾಲಯದ ಹೊರಗಡೆಯಲ್ಲಿಯೂ ನಡೆಯುತ್ತಿದ್ದರೂ, ದೇವಾಲಯದಲ್ಲಿ ಮಾರಾಟವಾಗುತ್ತಿದ್ದ ಬಲಿ ಅರ್ಪಣೆಯ ಪ್ರಾಣಿ ಪಕ್ಷಿಗಳು ಶ್ರೇಷ್ಠ ಎಂಬ ಭಾವನೆಯನ್ನು ದೇವಾಲಯದ ಯಾಜಕರೇ ತೇಲಿಬಿಟ್ಟಿದ್ದರು. ಏಕೆಂದರೆ ದೇವಾಲಯದ ಒಳಗಡೆಯ ವ್ಯಾಪಾರದಲ್ಲಿ ಅವರದೂ ಪಾಲುದಾರಿಕೆ ಇರುತಿತ್ತು. ಮಹಾದೇವಾಲಯದಲ್ಲಿನ ಈ ಬಲಿ ಅರ್ಪಣೆಯ ಪ್ರಾಣಿ ಪಕ್ಷಿಗಳ ಬೆಲೆ ಹೊರಗಡೆಯದಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗಿದ್ದರೂ ಜನ ಅಲ್ಲಿಯೇ ದುಬಾರಿ ಬೆಲೆಯಲ್ಲಿ ಕೊಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದೊಂದು ರೀತಿಯ ಶೋಷಣೆ, ದಬ್ಬಾಳಿಕೆ.
ಹಾಗೆಯೇ ಮಹಾದೇವಾಲಯಕ್ಕೆ ಜನ ದೂರ ದೂರದ ದೇಶಗಳಿಂದ ಬರುತ್ತಿದ್ದರು. ಸಹಜವಾಗಿಯೇ ಹಣ, ನಾಣ್ಯಗಳು ಬೇರೆಯದಾಗಿರುತ್ತಿತ್ತು. ಈ ಹಣವನ್ನು ಸ್ಥಳೀಯ ಹಣವಾಗಿ ಪರಿವರ್ತಿಸುವ ವಿನಿಮಯ ಕೇಂದ್ರವೂ ಮಹಾದೇವಲಯದಲ್ಲೇ ಇದ್ದೂ ಅದು ಕೂಡ ಸಾಮಾನ್ಯಕ್ಕಿಂತ ಹೆಚ್ಚಿನ ವಿನಿಮಯ ಶುಲ್ಕವನ್ನು ದೇವಾಲಯದ ಅಭಿವೃದ್ಧಿ ಹೆಸರಿನಲ್ಲಿ ವಸೂಲಿ ಮಾಡುತ್ತಿತ್ತು. ಇದೂ ಕೂಡ ಒಂದು ರೀತಿಯ ಹಗಲು ದರೋಡೆಯೇ. ಇದರಿಂದ ಶೋಷಿತರಾಗುತ್ತಿದ್ದವರು ಬಡವರು ಹಾಗೂ ದೂರದ ಅಮಾಯಕ ಜನರು. ಯೇಸು ಈ ಶೋಷಣೆ, ದಬ್ಬಾಳಿಕೆಯ ವಿರೋಧಿಯಾಗಿದ್ದರು. ಬಡವರ ಪರವಾದ ಕಾಳಜಿ ಅವರಲ್ಲಿತ್ತು. ಮಹಾದೇವಾಲಯಕ್ಕೆ ಬಂದಾಗ, ಅಲ್ಲಿನ ವ್ಯಾಪಾರ, ಅನಾಚಾರ ಅವರ ಅಕ್ರೋಶಕ್ಕೆ ಕಾರಣವಾಯಿತು.
ಜೆರಸಲೇಮಿನಲ್ಲಿ ಯೇಸುವಿನ ಬಗ್ಗೆ ಯಾಜಕವರ್ಗಕ್ಕೆ ಸಿಟ್ಟು, ಮತ್ಸರವಿದ್ದೂ ಅವರ ವಿರುದ್ಧ ಕುತಂತ್ರ ನಡೆಯುತ್ತಿದ್ದರೂ, ಯೇಸು ಜೆರುಸಲೇಮ್ ನಗರವನ್ನು, ಮಹಾದೇವಾಲಯವನ್ನು ಅಪಾರವಾಗಿ ಪ್ರೀತಿಸುತ್ತಿದ್ದದ್ದನ್ನು, ಆ ನಗರದ ಮುಂದಿನ ದುರ್ಗತಿಗಾಗಿ ದು:ಖಗೊಂಡಿದ್ದನು ನಾವು ಶುಭಸಂದೇಶದಲ್ಲಿ ಕಾಣಬಹುದು. ಆದರಿಂದಲೇ ಮಹಾದೇವಾಲಯದ ಪಾವಿತ್ರತೆ, ಶಾಂತತೆ ಹಾಗೂ ಇತಿಹಾಸ, ಹಾಗೂ ಪ್ರಾರ್ಥನೆಯ ವಾತಾವರಣಕ್ಕೆ ಧಕ್ಕೆ, ಭಂಗ ಬಂದಾಗ ಅವರು ಕೋಪಗೊಳ್ಳುತ್ತಾರೆ. ಯೆರೆಮೀಯಾ ಪ್ರವಾದಿಯ 7:11 ಮಾತುಗಳನ್ನು, ಯೆಶಾಯ ಪ್ರವಾದಿಯ 56:7ರ ಮಾತುಗಳನ್ನು ಇಲ್ಲಿ ಉಲ್ಲೇಖಿಸುತ್ತಾ ವರ್ತಕರನ್ನು, ವ್ಯಾಪಾರಿಗಳನ್ನು ಓಡಿಸುತ್ತಾರೆ. ಕೊನೆಗೆ ತಮ್ಮ ಬಳಿಗೆ ಬಂದ ಕುಂಟರು, ಕುರುಡರನ್ನು ಸ್ವಸ್ಥಪಡಿಸುತ್ತಾರೆ ಎಂಬ ಮಾತು ಶುಭಸಂದೇಶದಲ್ಲಿದೆ.
ಈ ಹಿನ್ನಲೆಯಲ್ಲಿ ಈ ಹಾಡನ್ನು ಕೇಳಿದಾಗ ಈ ಇಡೀ ಘಟನೆಯ ಸಾರವನ್ನು ಹಾಡು ಅದ್ಭುತವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ ಎಂದು ನನಗನಿಸುತ್ತದೆ. ಯೇಸು ಕೋಪಗೊಂಡು, ನಂತರ ಶಾಂತ ಚಿತ್ತರಾದ ಮೇಲಿನ ಶಾಂತ ವಾತಾವರಣದ ಸಂದರ್ಭದ ಸಂಕೇತವೋ ಎಂಬಂತೆ ಹಾಡು ಮಧುರವಾಗಿ ಆರಂಭಗೊಳ್ಳುತ್ತದೆ. ತಮ್ಮ ಕೋಪಕ್ಕೆ ಕಾರಣವೇನು, ಮಹಾದೇವಾಲಯದ ಪಾವಿತ್ರ್ಯತೆಯ ಮಹತ್ವವೇನು ಎಂಬುದನ್ನು ಸ್ವತ: ಯೇಸುವೇ ಹೇಳುವಂತೆ ಹಾಡು ಕೇಳಿಸುತ್ತದೆ.
’ಶುದ್ಧ ಮನಸ್ಸಿನ ಗುಡಿಯು ದೇವರ ಮಂದಿರವು’ ಎಂಬ ಸಾಲುಗಳು ಅನೇಕ ಅರ್ಥಗಳನ್ನು ನೀಡಬಲ್ಲದು. ದೇವರ ಗುಡಿ, ಮಂದಿರ ಎನ್ನುವುದು ಯಾವುದೇ ಗೊಂದಲವಿಲ್ಲದ ವಾತಾವರಣದಿಂದ ಕೂಡಿರಬೇಕೆಂಬ ಆಶಯ ಇಲ್ಲಿದೆ. ಅಂತೆಯೇ ನಮ್ಮ ಮನಸ್ಸುಗಳು ದೇವರ ಮಂದಿರವಾಗಬೇಕಾದರೆ ಅದು ಶುದ್ಧವಾಗಿರಬೇಕು ಹಾಗೂ ಎಲ್ಲಾ ರೀತಿಯ ಗೊಂದಲ, ಮೋಸ ವಂಚನೆಯ ಲೆಕ್ಕಚಾರಗಳಿಂದ ಮುಕ್ತವಾಗಿರಬೇಕೆಂಬ ಸಂದೇಶವೂ ಇಲ್ಲಿದೆ. ದೇವಾಲಯವನ್ನು, ದೈವ ಕಾರ್ಯಗಳಿಗೆ ಸಂಬಂಧಪಟ್ಟ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ , ತಮ್ಮ ಮೋಸದ ಕಾರ್ಯಗಳನ್ನು ದೇವರ ಹೆಸರಿನಲ್ಲಿ ಮಾಡುವ ಗೋಮುಖವ್ಯಾಘ್ರಗಳನ್ನು ನಾವು ಕಾಣಬಹುದಾಗಿದೆ. ದೇವಾಲಯವನ್ನು, ದೈವ ಅಧಿಕಾರವನ್ನು ಕಳ್ಳರ ಗುಹೆಯನ್ನಾಗಿ ಮಾಡಿಕೊಂಡ ಜನರು ಯೇಸುವಿನ ಕಾಲದಲ್ಲಿಯೂ, ಇಂದಿನ ಸಮಯದಲ್ಲೂ ಇರುವಾಗ , ಅದೆಲ್ಲವನ್ನು ತ್ಯಜಿಸಿ, ದೇವರ ಮಂದಿರವನ್ನು ಹೃದಯದ ಗುಡಿಯಾಗಿಸಿರಿ ಎಂಬ ಕರೆ ಈ ಹಾಡಿನಲ್ಲಿದೆ.
ಕೇವಲ ಐದೇ ಸಾಲಿರುವ, 2.30 ನಿಮಿಷದೊಳಗೆ ಮುಗಿದು ಹೋಗುವ ಈ ಗೀತೆ, ಈ ಧ್ವನಿಸುರಳಿಯ ಅತ್ಯಂತ ಮಧುರ ಗೀತೆಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಸಾಧು ಕೋಕಿಲರವರ ವಾದ್ಯ ಸಂಯೋಜನೆ ಈ ಸಾಹಿತ್ಯದ ಭಾವಕ್ಕೆ ಬೇಕಾದ ಮನಸ್ಥಿತಿ,mood ಅನ್ನು ಹಿಡಿದಿಟ್ಟಿದೆ. ಅದಕ್ಕಿಂತ ಮುಖ್ಯವಾಗಿ ಒಂದು ರೀತಿಯ ಮೌನ ಹಾಡಿನಲ್ಲಿ ನಡುವೆ ಇದ್ದಂತೆ ಭಾಸವಾಗುತ್ತದೆ. ಆ ಮೌನ ಇಣುಕಿರುವುದು ಕೆಲವೇ ಪದಗಳ ಸಾಹಿತ್ಯದಿಂದಾಗಿಯೋ ಅಥವಾ ಸಂಯಮದ ವಾದ್ಯ ಸಂಯೋಜನೆಯಿಂದಾಗಿಯೋ ಹೇಳುವುದು ಕಷ್ಟ. ಗಾಯನವೂ ಅಷ್ಟೇ ಸುಂದರವಾಗಿ ಮೂಡಿಬಂದಿದೆ. ಮಹಿಮೆ ನಾಟಕದಲ್ಲಿ ಸಹಾ ಯೇಸುವಿನ ಕೊನೆಯ ದಿನಗಳ ಮನಮುಟ್ಟುವ ದೃಶ್ಯಗಳಲ್ಲಿ ಈ ಹಾಡಿನ ದೃಶ್ಯವೂ ಒಂದು. ಅಂತೆಯೇ ಚಸರಾರವರ ಗೀತೆಗಳಲ್ಲಿ ’ನನ್ನ ತಂದೆಯ’ ನನ್ನ ಮೆಚ್ಚಿನ ಗೀತೆಗಳಲ್ಲಿ ಒಂದಾಗಿ ಉಳಿದುಕೊಂಡಿದೆ. ಇಂದಿಗೂ ನಮ್ಮ ಅನೇಕ ದೇವಾಲಯಗಳಲ್ಲಿ ಪ್ರವೇಶ ಗೀತೆಯಾಗಿ ಈ ಹಾಡನ್ನು ಹಾಡಲಾಗುತ್ತಿದ್ದು, ಹಾಡಿನ ನಿಜ ಅರ್ಥ ಇಂದಿಗೂ ಪ್ರಸ್ತುತವಾಗಿದೆ.
ಮುಂದೆ, ಇದೇ ಸಂವೇದ್ಯ ಧ್ವನಿಸುರಳಿಯ ಇನ್ನೊಂದೆರೆಡು ಹಾಡುಗಳ ಬಗ್ಗೆ ಬರೆಯಬೇಕಾಗಿದೆ.
ನನ್ನ ಮೆಚ್ಚಿನ ಚಸರಾ ಗೀತೆಗಳು - ಭಾಗ 2 ಸ್ಪೂರ್ತಿಯಾಗಲಿ ಕ್ರಿಸ್ತ
ಫಾ.ಚಸರಾರವರ ಸ್ಪೂರ್ತಿಯಾಗಲಿ ಕ್ರಿಸ್ತದ ಬಗ್ಗೆ ಕಳೆದ ಸಂಚಿಕೆಯಲ್ಲಿ ಬರದು ಅದನ್ನು
ಮುಂದುವರಿಸುವ ನಡುವೆ ಡಾ.ಜಿ.ಎಸ್.ಶಿವರುದ್ರಪ್ಪನವರ ’ಕಾವ್ಯಾರ್ಥ ಚಿಂತನ’ ಎಂಬ ಪುಸ್ತಕದ
ಒಂದೆರೆಡು ಅಧ್ಯಾಯಗಳನ್ನು ಓದುವ ಅವಕಾಶ ಆಕಸ್ಮಿಕವಾಗಿ ಸಿಕ್ಕಿತು. ಒಬ್ಬ ಕವಿಯ ಕಾವ್ಯ
ಕೃಷಿಯಲ್ಲಿ ಅಥವಾ ಒಂದು ಕಾವ್ಯ ಸೃಷ್ಟಿಯಲ್ಲಿ ಯಾವ ಯಾವ ಅಂಶಗಳು ಒಳಗೊಂಡಿರುತ್ತವೆ ಎಂಬುದರ
ಬಗ್ಗೆ ಅಧ್ಯಯನಶೀಲವಾದ ಲೇಖನಗಳ ಸರಮಾಲೆ ಪುಸ್ತಕದಲ್ಲಿದೆ. ಜಿ.ಎಸ್.ಎಸ್ ಎಂದಿನಂತೆ ಅತ್ಯಂತ
ಗಂಭೀರ ಹಾಗೂ ಆಳವಾದ ವಸ್ತುವನ್ನು ಅಪಾರವಾದ ಅಧ್ಯಯನದಿಂದ ಸರಳವಲ್ಲದಿದ್ದರೂ ಸುಲಲಿತವಾಗಿ
ಬರೆದಿದ್ದಾರೆ. ಕಾವ್ಯ ಸೃಷ್ಟಿಯ ವಿವಿಧ ಮಜಲುಗಳಲ್ಲಿ ’ಪ್ರತಿಭೆ’ಯ ಬಗ್ಗೆ ಮೊದಲ ಅಧ್ಯಾಯವಿದ್ದರೆ, ಎರಡನೆಯ ಅಧ್ಯಾಯ ’ಸ್ಪೂರ್ತಿ’ಗೆ
ಮೀಸಲು. ಕವಿಯೊಬ್ಬನಿಗೆ ಪ್ರತಿಭೆ ಹೇಗೆ
ಮುಖ್ಯವೋ ಹಾಗೆಯೇ ಆತ ಪಡೆಯುವ ಸ್ಪೂರ್ತಿ ಹಾಗೂ
ಅದರ ಪ್ರಾಮುಖ್ಯತೆಯ ಬಗ್ಗೆ ಸುವಿಸ್ತಾರವಾಗಿ ಬರೆದಿದ್ದಾರೆ ಜಿ.ಎಸ್.ಎಸ್.
’ಸ್ಪೂರ್ತಿಯಾಗಲಿ ಕ್ರಿಸ್ತ’ ಗೀತೆಯನ್ನು
ಒಬ್ಬ ಕಾವ್ಯ ವಿಮರ್ಶಕ ಕಾವ್ಯವೆಂದು ಪರಿಗಣಿಸಲಾರನೇನೋ, ಆದರೆ ಸಾಮಾನ್ಯ
ಕೇಳುಗನಿಗೆ ಅದೊಂದು ಸುಂದರವಾದ ಕವಿತೆಯೇ. ಜಿ.ಎಸ್.ಎಸ್ ರವರ ಆ ಮೊದಲೆರೆಡು ಅಧ್ಯಾಗಳನ್ನು
ಓದುತ್ತಾ ಹೋದಂತೆ, ಈ ಹಾಡಿನ ರಚನೆಯಲ್ಲಿ ಫಾ.ಚಸರಾರವರ ಪ್ರತಿಭೆಯ
ಪಾಲೆಷ್ಟು, ಅವರ ಪಡೆದುಕೊಂಡ ಸ್ಪೂರ್ತಿಯ ಪಾಲೆಷ್ಟಿರಬಹುದು ಎಂಬ
ಪ್ರಶ್ನೆ ಮನದಲ್ಲಿ ಮೂಡಿ ಬಂತು. ಫಾ ಚಸರಾ ಇದ್ದಿದ್ದರೆ ಕೇಳಬಹುದಿತ್ತೇನೋ? ಇದ್ದಾಗ ಕೇಳಿದ್ದರೂ ಹಾರಿಕೆಯ ಉತ್ತರವೇ ಸಿಗುತ್ತಿತ್ತೇನೋ?
ಚಸರಾರವರ ಅಪಾರ ಪ್ರತಿಭೆ, ಪದ ಬಂಢಾರ, ಸಂಗೀತ ಬಳಕೆ
ಬಗ್ಗೆ ಎರೆಡು ಮಾತಿಲ್ಲ. ಅವರ ಲೇಖನಗಳಲ್ಲೇ ಒಮ್ಮೊಮ್ಮೆ ಕವಿತೆಯ ಸ್ಪರ್ಶವಿದೆ. ಈ ಹಾಡಿನಲ್ಲಿ
ಅವರ ಪ್ರತಿಭೆಗಿಂತ ಅವರ ಮನದಾಳದ ಭಾವಗಳೇ ಹಾಡಾಗಿ ಮೂಡಿ ಬಂದಿದೆ ಎನಿಸುತ್ತದೆ. ಇಲ್ಲಿ ಎರೆಡು
ರೀತಿಯ ಸ್ಪೂರ್ತಿಯ ಸೆಲೆ ಹಾಡಿಗೆ ಪ್ರೇರಣೆಯಾಗಿದೆ. ಕ್ರಿಸ್ತ, ಆತನ
ಮಾನವ ಪ್ರೇಮ, ಮಾನವತೆ ಒಂದು ಸ್ಪೂರ್ತಿಯಾದರೆ, ತನ್ನ ಜನರ ನೋವು, ಭಾರ, ಆ ನೋವಿಗೆ
ದನಿಯಾಗುವ, ಹೆಗಲಾಗುವ, ಭಾರವನ್ನು
ಹಗುರಾಗಿಸುವ ವ್ಯಕ್ತಿಯೊಬ್ಬನ ಆಸೆ ಮತ್ತೊಂದು ಸ್ಪೂರ್ತಿ. ಹಾಡು ಹಂತ ಹಂತವಾಗಿ
ಸ್ಪೂರ್ತಿಯನ್ನು ಬೇಡುತ್ತಾ, ಸ್ಪೂರ್ತಿ ಪಡೆಯುತ್ತಾ ಕೊನೆಗೆ ತಾನೇ ಮತ್ತೊಬ್ಬರಿಗೆ ಸ್ಪೂರ್ತಿಯಾಗುವ ಬಯಕೆಯನ್ನು
ತೋಡಿಕೊಳ್ಳುತ್ತದೆ.
ಮೊದಲ ಸಾಲುಗಳಲ್ಲಿ ಕ್ರಿಸ್ತನ ಭಾವವು, ಆತನ
ಪ್ರೇಮವು ಸ್ಪೂರ್ತಿಯಾಗಲಿ ಎಂಬ ಪ್ರಾರ್ಥನೆ ಇದೆ. ಕ್ರಿಸ್ತನ ಯಾವ ಭಾವಗಳು ಎಂಬ ವಿವರಗಳು
ಇಲ್ಲಿಲ್ಲ. ಅದು ಕ್ರಿಸ್ತನ, ಕ್ಷಮಾ ಭಾವವಿರಬಹುದು, ಸಹನೆ, ಕ್ರಾಂತಿಕಾರಕ ಧೋರಣೆಯ ಭಾವವೂ ಇರಬಹುದು. ಇನ್ನೂ ’ಕ್ರಿಸ್ತನ ಪ್ರೇಮವು’ ಎಂಬುದು ಆತನ ಮಾನವತಾ ಪ್ರೇಮ, ದಲಿತರ,
ನೊಂದವರ, ಜೀವನದ ಜಂಜಾಟದಿಂದ ಬಳಲುವವರ ಪರವಾದ ಕಾಳಜಿಯ
ಭಾವವೂ ಇರಬಹುದು. ಅದೆಲ್ಲವೂ ’ನನ್ನ ಪ್ರೇಮದ
ಕಾವ್ಯಕ್ಕೆ ಸ್ಪೂರ್ತಿಯಾಗಲಿ’ ಎನ್ನುವಾಗ ಅಲ್ಲಿ ರಚನಾಕಾರರ ಉದ್ದೇಶಗಳ ಪರಿಚಯವೂ ಆಗಿ, ಅದಕ್ಕೆ ಕ್ರಿಸ್ತ ಸ್ಪೂರ್ತಿಯಾಗಲಿ ಎನ್ನುವುದರೊಂದಿಗೆ ಪ್ರಾರ್ಥನೆಗೊಂದು ಪೂರ್ಣತೆ
ದೊರೆಯುತ್ತದೆ.
ಇನ್ನೂ ಹಾಡಿನ ಮೊದಲ ಚರಣದಲ್ಲಿ, ’ಭಾವರಹಿತ ಹೃದಯಗಳ’
ಬಗ್ಗೆ ಪ್ರಾರ್ಥನೆ ಇದೆ. ಗೆತ್ಸೆಮನಿ ತೋಪಿನಲ್ಲಿ ಯೇಸು ಪ್ರಾರ್ಥಿಸುವಾಗ ಬಹಳವಾಗಿ
ನೊಂದುಕೊಂಡಿದ್ದು ಇದೇ ಭಾವರಹಿತರ ಬಗ್ಗೆಯೇ. ನಿಜ ದೇವರನ್ನು, ದೇವರ
ಆಶಯವನ್ನು ತಿಳಿಯದ ನಿರ್ಲಿಪ್ತ ಜನರ ಬಗ್ಗೆ ಯೇಸು ಅನೇಕ ಕಡೆ ಬೇಸರ ವ್ಯಕ್ತಪಡಿಸುವುದನ್ನು ಬೈಬಲ್
ನಲ್ಲಿ ಕಾಣಬಹುದಾಗಿದೆ. ಸದಯ ಸಮಾರಿತನ ಸಾಮತಿಯಲ್ಲಿ ಸಹಾ ಗಾಯಾಳುವಿಗಾಗಿ ಮರುಗದ ಭಾವರಹಿತ ಯಾಜಕ
ಹಾಗೂ ಲೇವಿಯವನಿಗಿಂತ ಸಮಾರಿತನ ಹೃದಯ ವೈಶಾಲ್ಯದಿಂದಾಗಿ ಆತನೇ ನೆರೆಯವನು ಎಂದು ಯೇಸು
ಹೇಳುತ್ತಾರೆ. ನಿಜ ದೇವರನ್ನು ಅರಿಯದವರು ’ಭಾವರಹಿತರಾದರೆ’ , ಪರರ
ಕಷ್ಟಗಳಿಗೆ ಸ್ಪಂದಿಸದವರೂ ಅದೇ ಸಾಲಿಗೆ
ಸೇರುತ್ತಾರೆ. ಜಗತ್ತಿನಲ್ಲಿ ನಡೆಯುವ ಅನೇಕ
ತಪ್ಪುಗಳಿಗೆ ದುಷ್ಟರ ದುಷ್ಟತನ ಎಷ್ಟು ಕಾರಣವೋ,
ಒಳ್ಳೆಯವರ ಮೌನವೂ ಅಷ್ಟೇ ದೊಡ್ಡ ಕಾರಣ ಎಂಬರ್ಥದ ಮಾತುಗಳನ್ನು ಮಾರ್ಟಿನ್ ಲೂಥರ್
ಹೇಳುತ್ತಾರೆ.ಇಂತಹ ಭಾವರಹಿತರಲ್ಲಿ ಕ್ರಿಸ್ತನ ಸ್ಪೂರ್ತಿ ಹರಿಯಲಿ ಎಂಬ ಸಾಲು ನಿಜಕ್ಕೂ ಅರ್ಥಗರ್ಭಿತ.
ಮುಂದಿನ ಸಾಲು ದುಡಿದು ಬೆಂದ ಜನರನ್ನು ಕ್ರಿಸ್ತನ ಸ್ಪೂರ್ತಿ ತಣಿಸಲಿ ಎನ್ನುತ್ತದೆ. ಇದೂ ಕೂಡ
ಕ್ರಿಸ್ತನ ಆಶಯವೇ. ’ದುಡಿದು ಬಳಲಿದ ಜನರೇ, ಬನ್ನಿ
ನನ್ನ ಬಳಿಗೆ ನಾ ನೀಡುವೆ ನಿಮಗೆ ವಿಶ್ರಾಂತಿಯ’ ಎಂಬ ಯೇಸುವಿನ ಕರೆ ಈ ಸಾಲಿಗೆ ಸ್ಪೂರ್ತಿಯೇನೋ.
ವಿಶ್ರಾಂತಿಯ ಸ್ಪೂರ್ತಿ ನಿಜಕ್ಕೂ ದುಡಿದ ಜನರ ಮನವನ್ನು ತಣಿಸಬಲ್ಲದು ಹಾಗೂ ಅನಿವಾರ್ಯವಾದ ದುಡಿತದ
ಶ್ರಮವನ್ನುಸಹನೀಯಗೊಳಿಸಬಹುದು. ಇನ್ನೂ, ಬಿತ್ತಿದ ಬೀಜ ಚಿಗುರಲು,
ಬೆಳೆಯಲು, ಹೆಮ್ಮರವಾಗಲು ಬೆಳಕು, ಬೆಳಕಿನ ಕಾವು ಅವಶ್ಯ. ಅಂತೆಯೇ ಭರವಸೆ, ಆಸೆ, ಕನಸುಗಳು ಚಿಗುರಲು, ಬೆಳೆಯಲು ಕ್ರಿಸ್ತನ ಪ್ರೇಮದ ಬೆಚ್ಚನೆಯ
ಸ್ಪರ್ಶ, ಕಾವು ಅವಶ್ಯ. ಆ ಪ್ರೀತಿಯ ಕಾವಿನಲ್ಲಿ ಎಲ್ಲವೂ ಚಿಗುರಲಿ ಎಂಬ
ಆಶಯದೊಂದಿಗೆ ಮೊದಲ ಚರಣ ಮುಗಿಯುತ್ತದೆ.
ಮುಂದೆ ಹಾಡಿನ ಗಮನ ಹರಿಯುವುದು ’ತುಳಿತದಿಂದ ನರಳುತ್ತಿರುವ ಜನರತ್ತ’. ಎಲ್ಲಾ ರೀತಿಯ ಶೋಷಣೆಗೆ ಒಳಗಾದ ಜನರು ಇಲ್ಲಿ
ನೆನಪಾಗುತ್ತಾರೆ. ಜಾತಿಯ ಶೋಷಣೆಗೊಳಗಾದ ದಲಿತ, ಸಂಖ್ಯಾಬಲದ
ಕಾರಣ ನಿರ್ಲಕ್ಷ್ಯಕ್ಕೊಳಗಾಗುವ ಅಲ್ಪಸಂಖ್ಯಾತ,
ಕೌಟಂಬಿಕ ದೌರ್ಜನ್ಯ ಎದುರಿಸುವ ಮಹಿಳೆ, ತನ್ನದೇ
ನೆಲದಲ್ಲಿ ಪರಕೀಯನಾದ ಕನ್ನಡ ಕ್ರೈಸ್ತ ಎಲ್ಲರಿಗೂ ಈ ಸಾಲಿನಲ್ಲಿ ಪಾಲಿದೆ. ಅಂತಹ ಜನತೆಗೆ ಒಳ್ಳೆಯ
ದಿನಗಳು ಬರಲಿ, ಆ ದಿನಗಳಿಗೆ ಆಸೆಯಿಂದ ಕಾಯುವ , ನಿರೀಕ್ಷಿಸುವ ಸಹನೆಗೆ ಬೇಕಾದ ಸ್ಪೂರ್ತಿಯನ್ನು ಅವರಿಗೆ ನೀಡು ಎಂದು ಈ ಸಾಲುಗಳು
ಬೇಡಿಕೊಳ್ಳುತ್ತದೆ. ಅಲ್ಲಿಯವರೆಗೂ ಅವರ ನೋವನ್ನು ನೀಗಿಸು ಎಂಬ ಬೇಡಿಕೆಯೂ ಅಲ್ಲಿದೆ.
'Helping hands are better than praying lips' ಎಂಬ ಮಾತನ್ನು ನೆನಪಿಸುವ ಸಾಲುಗಳು
ಮುಂದೆ ಬರುತ್ತವೆ. ಪ್ರಾರ್ಥನೆಗಿಂತ ಸಹಾಯ ನೀಡುವ ಕರಗಳು ಉತ್ತಮ ಎಂಬುದು ಇದರ ಅರ್ಥವಾದರೂ,
ಪ್ರಾರ್ಥನೆಯೊಂದಿಗೆ ನಮ್ಮ ಕ್ರಿಯಾಶೀಲ ಪ್ರಯತ್ನವೂ ಆಗಬೇಕು ಎನ್ನುವುದು ಅದರ
ವಿಶಾಲ ಅರ್ಥ. ಭಾವರಹಿತ ಹೃದಯಗಳಿಗೆ, ಬೆಂದ ಜನರಿಗೆ, ಶೋಷಣೆಗೊಳಗಾದ ಜನರಿಗೆ ಬೇಡಿಕೊಂಡ ರಚನಾಕಾರರು ಇಲ್ಲಿ ತಮ್ಮ ಪಾತ್ರದ ಬಗ್ಗೆ
ಯೋಚಿಸತೊಡುಗುತ್ತಾರೆ. ಇಲ್ಲಿ ಚಸರಾರವರ ನಿಲುವು, ನೈಜ ಕಾಳಜಿ,
ಭಾವ ತೆರೆದುಕೊಳ್ಳುತ್ತದೆ. ಎಲ್ಲಾ ಜನರಿಗಾಗಿ ಕ್ರಿಸ್ತ ನೀನು
ಸ್ಪೂರ್ತಿಯಾಗುವುದರ ಜೊತೆಗೆ ಅವರ ನೆರವಿಗೆ ನನ್ನ ದನಿಯು ಸೇರಲಿ ಎಂಬ ಆಶಯ ಈ ಸಾಲಿನಲ್ಲಿದೆ.
ಕೇವಲ ಪಾರ್ಥಿಸುವುದು ಮಾತ್ರವಲ್ಲದೆ ನಮ್ಮ ಕೊಡುಗೆಯೂ ಇರಬೇಕು ಎನ್ನುವುದು ಇಲ್ಲಿದೆ. ನೊಂದವರ,
ಬಳಲಿದವರ, ಶೋಷಿತರ ಪರವಾಗಿ ನಿಲ್ಲುವುದೆಂದರೆ
ಅವರಿಗಾಗಿ ದನಿ ಎತ್ತುವುದು, ಅವರ ಜೊತೆ ಬಳಲುವುದು, ಅವರಿಗಾಗಿ ನರಳವುದು ಎಲ್ಲವೂ ಸೇರಿಕೊಳ್ಳುತ್ತದೆ. ನಮ್ಮ ತೊಡಗುವಿಕೆ ಅವರಿಗೆ ಸಾಂತ್ವನ
ನೀಡಲಿ, ಅವರ ಜಂಜಾಟದ ಬದುಕಿಗೆ ನಮ್ಮ ನೆರವು ಸ್ಪೂರ್ತಿಯಾಗಲಿ ಎಂಬ ಉದಾತ್ತ
ಆಶಯದೊಂದಿಗೆ ಹಾಡು ಪದಗಳಲ್ಲಿ, ಶಬ್ದಗಳಲ್ಲಿ ಮುಕ್ತಾಯಗೊಂಡರೂ ಅಂತರಂಗದ
ಆಲಾಪವಾಗಿ ಮುಂದುವರಿಯುತ್ತದೆ.
ಏಳೆಂಟು ಸಾಲುಗಳ ಈ ಹಾಡಿನಲ್ಲಿ ಫಾ ಚಸರಾರವರ ಅಶಯ ಇನ್ನೇನಿತ್ತೋ? ನನಗೆ ಗೋಚರವಾದ ಭಾವಗಳು
ಇವು. ಒಮ್ಮೆ ಒಂದು ಗೀತೆ ಕೇಳುಗನನ್ನು
ಮುಟ್ಟುತ್ತಿದ್ದಂತೆ ಅದು ರಚನಾಕಾರ, ಸಂಗೀತ ನಿರ್ದೇಶಕನ ಸ್ವತ್ತಲ್ಲ,
ಇನ್ನೇನ್ನಿದ್ದರೂ ಕೇಳುಗನಿಗೆ ಸೇರಿದ್ದೂ ಎನ್ನುತ್ತಾರೆ ಕನ್ನಡದ ಕವಿಯೊಬ್ಬರು.
ಆ ಮಾತಂತೆ ರಚನಾಕಾರರ ಆಶಯಕ್ಕೆ ಕೇಳುಗರಿಗೆ ಗೋಚರಿಸುವ ಅರ್ಥಗಳೂ ಸೇರಿಕೊಂಡಾಗ ಒಂದು ಗೀತೆ
ಅಮರವಾಗುತ್ತದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ
’ಸ್ಫೂರ್ತಿಯಾಗಲಿ ಕ್ರಿಸ್ತ’ ಕನ್ನಡ ಕ್ರೈಸ್ತ ಜನಪದ ಭಾಗವಾಗಿ ಉಳಿದು ಹೋಗಿದೆ ಎಂದರೆ ತಪ್ಪಾಗಲಾರದೇನೋ.
ಮೊದಲೇ ಹೇಳಿದಂತೆ ಈ ಹಾಡಿನ ಭಾವ ತೀವ್ರತೆಯನ್ನು ಅತ್ಯಂತ ಸಮರ್ಥವಾಗಿ ಹಿಡಿದಿಟ್ಟಿರುವುದು
ಹಾಡಿನ ವಾದ್ಯ ಸಂಯೋಜನೆ ಹಾಗೂ ಗಾಯನ. ಸಾಧು ಕೋಕಿಲರವರ ಸಂಗೀತದ ನೈಪುಣ್ಯ ಇಲ್ಲಿ ಉತ್ಕೃಷ್ಟ
ಮಟ್ಟದಲ್ಲಿ ಹೊರ ಹೊಮ್ಮಿದೆ. ಯಾವ ಸಂಗೀತದ ಮಟ್ಟಿಗೆ ಯಾವ ವಾದ್ಯ ಬಳಕೆಯಾಗಬೇಕು ಎಂಬ ಆಯ್ಕೆಯಲ್ಲಿ
ಸಾಧುರವರು ಯಾವಾಗಲೂ master class. ಚಸರಾರವರ ಸಾಹಿತ್ಯದಲ್ಲಿನ ಅಷ್ಟೂ
ತನ್ಮಯತೆಯನ್ನು, ಆಳವನ್ನು ತಮ ಕಂಠದೊಳಗೆ ಬರಮಾಡಿಕೊಂಡಂತೆ ಗಾಯಕ
ವಿಷ್ಣು ದನಿ ನೀಡಿದ್ದಾರೆ. ಒಬ್ಬ ಸಹೃದಯ ಕವಿಯ ಅಂತರಾಳದ ಭಾವಗಳಿಗೆ ಹೃದಯಸ್ಪರ್ಶಿ ಸಾಹಿತ್ಯ
ಒದಗಿ ಬಂದು ಮನಮುಟ್ಟುವ ಸಂಗೀತ ಕೂಡಿಕೊಂಡು, ಹೃದಯದಿಂದ ಹೊಮ್ಮಿದಂತ
ಗಾಯನ ಸೇರಿದರೆ ಏನಾಗಬಹುದೋ ಅದು ’ಸ್ಪೂರ್ತಿಯಾಗಲಿ ಕ್ರಿಸ್ತ’ ಹಾಡಿನಲ್ಲಿ ಆಗಿದೆ.
ಇಂತಹ ಇನ್ನಷ್ಟು ಗೀತೆಗಳಿಗೆ ಕ್ರಿಸ್ತ
ಸ್ಪೂರ್ತಿಯಾಗಲಿ.
Subscribe to:
Comments (Atom)








